ಬೆಂಗಳೂರು: ಕೆಲದಿನಗಳ ಹಿಂದಷ್ಟೇ ಮೇಖ್ರಿ ಸರ್ಕಲ್ ಬಳಿ ಮೊಹಮ್ಮದ್ ನಲಪಾಡ್ ಅವರು ಅಪಘಾತ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಅವರ ಮೇಲೆ ದಾಖಲಾಗಿದೆ.
ಘಟನೆ ಏನು? ಭಾನುವಾರ (ಮಾರ್ಚ್ 15) ವೈಯ್ಯಾಲಿಕಾವಲ್ ತೆಲುಗು ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಬಿ.ನಾರಾಯಣ ರಾವ್ ಪುತ್ರ, ಶಾಸಕ ಎನ್.ಎ.ಹ್ಯಾರಿಸ್ ಪುತ್ರ ನಲಪಾಡ್ ಸೇರಿದಂತೆ ಯೂತ್ ಕಾಂಗ್ರೆಸ್ ಕಾರ್ಯಕರ್ತರಿದ್ದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕನ ಪುತ್ರ ಗೌತಮ್ಗೆ ವೇದಿಕೆ ಮೇಲೆ ಅವಕಾಶ ನೀಡಲಿಲ್ಲವಂತೆ. ಇದನ್ನ ಕಾರ್ಯಕರ್ತ ಸಚಿನ್ ಗೌಡ ಅವರು ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಆಗ ಇದನ್ನೆಲ್ಲ ಪ್ರಶ್ನಿಸಲು ನೀನ್ಯಾರು ಎಂದು ಶಿವಕುಮಾರ್, ಸಚಿನ್ಗೆ ಅವಾಜ್ ಹಾಕಿದ್ದಾರೆ. ಅಲ್ಲಿದ್ದ ನಲಪಾಡ್ ಹಾಗೂ ಆತನ ಗನ್ಮ್ಯಾನ್ ಏಕಾಏಕಿ ಸಚಿನ್ ಮೇಲೆ ಹಲ್ಲೆಗೆ ಮುಂದಾದ್ರು ಎಂದು ಸಚಿನ್ ದೂರಿನಲ್ಲಿ ತಿಳಿಸಿದ್ದಾರೆ. ನಿನಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಚಿನ್ ನನ್ನ ಮೇಲೆ ಜಗಳ ಕ್ಯಾತೆ ತೆಗೆದರು ಎಂದು ನಲಪಾಡ್ ಪ್ರತಿದೂರು ದಾಖಲಿಸಿದ್ದಾರೆ.
ಸದ್ಯ ನಲಪಾಡ್ ಹಾಗೂ ಸಚಿನ್ ವಿರುದ್ಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಹಲ್ಲೆ ಮಾಡಿ ಪುಂಡಾಟ ಮೆರೆದಿರುವುದು ಯಾರು ಎಂಬುದು ಪೊಲೀಸರ ವಿಚಾರಣೆಯಿಂದ ಹೊರಬರಬೇಕಿದೆ.