ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಬೆಳಗ್ಗೆ ಉದ್ಘಾಟಿಸಿದರು.
ಸರ್ಎಂವಿ ಸಭಾಂಗಣ ಕೈಗಾರಿಕಾ ಮಹಾಸಂಸ್ಥೆಯ ಮುಖ್ಯ ಕಚೇರಿಯಲ್ಲಿ 103 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ನಂತರದ ಮೊದಲ ಸಭೆ ಇದಾಗಿದ್ದು, ಸಭೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಉದ್ಯಮ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುತ್ತಿದೆ. ಬೆಂಗಳೂರಿನಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಅಮೃತಹಸ್ತದಿಂದ ಸ್ಥಾಪಿತವಾದ ಈ ಮಹಾನ್ ಸಂಸ್ಥೆಯ 103 ನೇಯ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಲು ಸಂತೋಷವೆನಿಸುತ್ತದೆ ಎಂದರು.
ರಾಜ್ಯವು ಆರ್ಥಿಕವಾಗಿ ಬೆಳೆವಣಿಗೆ ಸಾಧಿಸಲು ಎಫ್.ಕೆ.ಸಿ.ಸಿ.ಐ. ಗಣನೀಯ ಕೊಡುಗೆ ನೀಡುತ್ತಿದೆ. ರಾಜ್ಯವೊಂದರ ಆರ್ಥಿಕ ಪ್ರಗತಿಯಲ್ಲಿ ಕೈಗಾರಿಕೀಕರಣವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಕರ್ನಾಟಕ ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಸಾರ್ವಜನಿಕ ವಲಯ, ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ವಲಯಗಳಲ್ಲಿ ಪ್ರಾಬಲ್ಯ ಹೊಂದಿದೆ. ಕೊರೊನಾ ವೈರಸ್ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುವುದರ ಜೊತೆಗೆ ಜಾಗತಿಕ ಆರ್ಥಿಕತೆಯನ್ನು ಅತ್ಯಂತ ಬಿಕ್ಕಟ್ಟಿನತ್ತ ಕೊಂಡೊಯ್ದಿದೆ ಎಂದು ಹೇಳಿದರು.
ಇದೀಗ ಆರ್ಥಿಕ ಚಟುವಟಿಕೆಗಳು ಮತ್ತು ಸರಬರಾಜು ಸರಪಳಿಗಳು ನಿಧಾನವಾಗಿ ಸಹಜ ಸ್ಥಿತಿಗೆ ಬರಲು ಆರಂಭಿಸಿದೆ. ಪ್ರಸ್ತುತ ಸನ್ನಿವೇಶದ ಮಧ್ಯೆ ವಾಣಿಜ್ಯ ಸಂಸ್ಥೆಗಳು, ಎಂ.ಎಸ್.ಎಂ.ಇ ವಲಯಗಳು ಮತ್ತು ದೊಡ್ಡ ಉದ್ದಿಮೆದಾರರು ಈಗ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದು ಆಶಾದಾಯಕ ಬೆಳವಣಿಗೆ. ಕೋವಿಡ್-19 ಅನಾನುಕೂಲಗಳ ತೀವ್ರತೆಯನ್ನು ತಗ್ಗಿಸಲು, ಆರ್ಥಿಕ ಒತ್ತಡವನ್ನು ನಿವಾರಿಸಲು, ಆರ್ಥಿಕ ಬೆಳೆವಣಿಗೆಯನ್ನು ಸಾಧಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಈಗಾಗಲೇ ಸೂಕ್ತ ಪರಿಹಾರ ಮತ್ತು ಉತ್ತೇಜನ ಪ್ಯಾಕೇಜ್‍ಗಳನ್ನು ಘೋಷಿಸಿವೆ. ಇದು ಉದ್ಯಮಿಗಳ ವಿಶ್ವಾಸವನ್ನು ಹೆಚ್ಚಿಸಿ ಅವರ ಹಣಕಾಸಿನ ಸ್ಥಿತಿಯನ್ನು ಉತ್ತಮ ಪಡಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕೊರೊನಾ ಪರಿಸ್ಥಿತಿಯಲ್ಲೂ 42% ವಿದೇಶಿ ನೇರ ಬಂಡವಾಳ (ಎಫ್‍ಡಿಐ) ಕರ್ನಾಟಕಕ್ಕೆ ಬಂದಿರುವುದು ಸಂತೋಷದ ವಿಚಾರ. ಇತ್ತೀಚೆಗೆ ಕರ್ನಾಟಕ ಸರ್ಕಾರವು ಭೂ-ಸುಧಾರಣಾ ಕಾಯ್ದೆಯಲ್ಲಿ ಸುಧಾರಣೆಗಳನ್ನು ತರುವ ಮೂಲಕ ತಂದ ಕ್ರಾಂತಿಕಾರಿ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಕೈಗಾರಿಕೋದ್ಯಮಗಳಿಗೆ ಭೂಮಿ ಖರೀದಿ ಸುಲಭವಾಗಿದೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಅಡಿಯಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆ ತಿದ್ದುಪಡಿ ತಂದಿದೆ ಎಂದು ಹೇಳಿದರು.
ಈ ತಿದ್ದುಪಡಿ ಪ್ರಕಾರ ಯಾವುದೇ ಉದ್ಯಮವನ್ನು ಪ್ರಾರಂಭಿಸಲು ವಿವಿಧ ಪರವಾನಗಿಗಳ ತಕ್ಷಣದ ಅನುಮೋದನೆಯನ್ನು ರದ್ದುಪಡಿಸಲಾಗಿದೆ ಮತ್ತು ಅದರ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು 3 ವರ್ಷದೊಳಗೆ ಪರವಾನಿಗೆ ಪಡೆಯಬಹುದು. ಅದೇ ರೀತಿ ಕಾರ್ಮಿಕ ಕಾಯ್ದೆಗೆ ಸುಧಾರಣೆಗಳನ್ನು ತರುವಲ್ಲಿಯೂ ಸರ್ಕಾರ ಕೆಲಸ ಮಾಡುತ್ತಿದೆ. ಕರ್ನಾಟಕ ಸರ್ಕಾರ ಇಡೀ ಕೈಗಾರಿಕಾ ಸಮೂಹದ ಪರವಾಗಿ 'ಹೊಸ ಕೈಗಾರಿಕಾ ನೀತಿ 2020-25' ಅನ್ನು ಪ್ರಕಟಿಸುವ ಮೂಲಕ ಮತ್ತು ವಿವಿಧ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಗಮನಾರ್ಹ ಸುಧಾರಣೆಗಳನ್ನು ತಂದು ಆರ್ಥಿಕತೆ ಬೆಳವಣಿಗೆಗೆ ಪ್ರಯತ್ನವನ್ನು ಮಾಡಿದೆ ಎಂದು ಹೇಳಿದರು
ಸಭೆಯಲ್ಲಿ ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷರಾದ ಪೆರಿಕಲ್ ಎಂ. ಸುಂದರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.