ಬೆಂಗಳೂರು: ನಾನು ಹಾಗೂ ಕೇಂದ್ರದ ಮಾಜಿ ಸಚಿವ ದಿ.ಅನಂತ ಕುಮಾರ್ ಕಾಲೇಜ್ ಮೇಟ್ಸ್, ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್. ಕ್ಲಾಸ್ನಲ್ಲಿ ನಾವು ಒಬ್ಬರಿಗೊಬ್ಬರಿಗಾಗಿ ಸೀಟ್ ಹಿಡಿದುಕೊಳ್ಳುತ್ತಿದ್ದೆವು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದೆವು. ಚಿಕ್ಕಂದಿನಲ್ಲೇ ಅವರಲ್ಲಿನ ನಾಯಕತ್ವ ಗುಣವನ್ನು ಕಂಡಿದ್ದೆ ಎಂದು ಅನಂತ್ ಕುಮಾರ್ ಜೊತೆಗಿನ ಒಡನಾಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದರು.
ಜಯನಗರ ಬಡಾವಣೆಯಲ್ಲಿ ಇರುವ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಕಚೇರಿಯನ್ನು ಅನಂತ ಪ್ರೇರಣಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದ್ದು, ಈ ಕೇಂದ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಇಂದು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅನಂತ್ ಕುಮಾರ್ ಒಬ್ಬ ನೈಜ ನಾಯಕ. ಯಾವುದೇ ಸ್ಥಿತಿಯಲ್ಲಿ ಯಾವುದೇ ಹಂತ ಇರಲಿ, ಆ ಎಲ್ಲ ಸ್ಥಿತಿಗಳಲ್ಲಿ ನಾಯಕತ್ವ ವಹಿಸುವ ನಿಜವಾದ ನಾಯಕ. ಕಾಲೇಜು ದಿನಗಳಿಂದ ಹಿಡಿದು ಎಬಿವಿಪಿ, ಬಿಜೆಪಿಯಲ್ಲಿ ಪಕ್ಷವನ್ನು ಅಧಿಕಾರ ತರಲು ನಾಯಕತ್ವ ವಹಿಸಿದ್ದರು. 10 ಜನ ಇದ್ದರೂ 10 ಲಕ್ಷ ಜನ ಇದ್ದರು ನಾಯಕತ್ವವಹಿಸಿದ ಅಪರೂಪದ ನಾಯಕ ಎಂದು ಬಣ್ಣಿಸಿದರು.
ಅವರು ಯಾವತ್ತೂ ಸಚಿವರು ಅನ್ನೋದನ್ನು ಎಲ್ಲಿಯೂ ತೋರಿಸುತ್ತಿರಲಿಲ್ಲ. ನೀರಾವರಿ ಯೋಜನೆಗಳು ಸೇರಿದಂತೆ ರಾಜ್ಯದ ನೆಲ ಜಲದ ವಿಚಾರದಲ್ಲಿ ಗಟ್ಟಿಯಾಗಿ ನಿಂತಿದ್ದವರು. ಕೃಷ್ಣಾ ನದಿ ವಿಚಾರದಲ್ಲಿ ಆಂಧ್ರ ಹಾಗೂ ನಮ್ಮ ನಡುವೆ ಗಲಾಟೆ ಆಗುವ ಸಂದರ್ಭ ಬಂದಿತ್ತು. ಅಂತಹ ಸಂದರ್ಭದಲ್ಲಿ ನ್ಯಾಯ ಸಮ್ಮತವಾಗಿ ಬರೆಯಬೇಕು ಅಂತಾ ಲಾ ಕಮೀಷನ್ ಜೊತೆ ಗುದ್ದಾಡಿ ಕರ್ನಾಟಕಕ್ಕೆ ಬಂದಿದ್ದ ಆಪತ್ತನ್ನು ತಪ್ಪಿಸಿದ್ದರು ಎಂದರು.
ಅನಂತ್ ಕುಮಾರ್ ಪ್ರತಿಮೆ ನಿರ್ಮಾಣಕ್ಕೆ ಸಹಕಾರ: ತೇಜಸ್ವಿನಿ ಅನಂತ್ ಕುಮಾರ್ಗೂ ನಾಯಕತ್ವ ಗುಣ ಇದೆ. ಅದಮ್ಯ ಚೇತನ ಹಾಗೂ ಸಸ್ಯ ಕ್ರಾಂತಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ನನ್ನ ಆತ್ಮೀಯ ಮಿತ್ರ, ಆತ್ಮೀಯ ಸಂಗಾತಿ, ಜನ ಮೆಚ್ಚಿದ ನಾಯಕ, ಜಗ ಮೆಚ್ವಿದ ನಾಯಕ, ತಂದೆ ತಾಯಿ ಮೆಚ್ಚಿದ ಮಗ, ದೇಶದ ಭಾರತ ಮಾತೆಯ ಪುತ್ರ ಸದಾಕಾಲ ಪ್ರೇರಣೆ ಇದ್ದೇ ಇರುತ್ತದೆ. ಅನಂತ್ ಕುಮಾರ್ ಅವರ ಪ್ರತಿಮೆ ನಿರ್ಮಾಣದ ಬಗ್ಗೆ ತೇಜಸ್ವಿನಿ ಅವರಿಗೆ ಕನಸಿದೆ ಅದಕ್ಕೆ ಸರ್ಕಾರದ ಸಹಕಾರವಿದೆ ಎಂದು ಸಿಎಂ ಭರವಸೆ ನೀಡಿದರು.
ಅನಂತ್ ಕುಮಾರ್ರಿಂದ ಪ್ರಭಾವಿತನಾಗಿದ್ದೆ: ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರಿಂದ ನಾನು ಪ್ರಭಾವಿತನಾಗಿದ್ದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ನಾನು ಮಧ್ಯಪ್ರದೇಶದಲ್ಲಿ ಯುವ ಮೋರ್ಚಾ ಕಾರ್ಯಕರ್ತ ಆಗಿದ್ದೆ, ಆಗಿಂದಲೂ ನಾನು ಅನಂತ್ ಕುಮಾರ್ ಅವರ ಹೆಸರು ಕೇಳುತ್ತಾ ಬಂದಿದ್ದೇನೆ. 1996ರಲ್ಲಿ ನಾನು ಸಂಸದನಾದೆ ಅನಂತ್ ಕುಮಾರ್ ಅವರೂ ಸಂಸದರಾಗಿದ್ದರು ಆಗಿಂದಲೂ ಅವರ ಜತೆ ಸ್ನೇಹ ಇತ್ತು. ಅನಂತ್ ಕುಮಾರ್ ಜತೆ ಕೆಲಸ ಮಾಡಿದ್ದೇನೆ. ಅನಂತ್ ಕುಮಾರ್ ಅವರಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ ಎಂದರು.
ಇದನ್ನೂ ಓದಿ: ಬಿಬಿಎಂಪಿ ಚುಕ್ಕಾಣಿ ಹಿಡಿದ ತುಷಾರ್ ಗಿರಿನಾಥ್: ಪಾಲಿಕೆ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕಾರ