ಬೆಂಗಳೂರು : ದೇಶದ್ರೋಹ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಅಮೂಲ್ಯ ಲಿಯೋನ್ನ ಮತ್ತೊಂದು ಸಂಗತಿ ಅನಾವರಣವಾಗಿದ್ದು, ಘಟನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆಯೇ ಅಮೂಲ್ಯ ಲಿಯೋನ್ ಪೊಲೀಸರ ಅತಿಥಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ಜನವರಿ 7ರಂದು ವಿಧಾನಸೌಧದ ಎದುರುಗಡೆ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಆಕೆ ಒಂಟಿಯಾಗಿ ಪ್ರತಿಭಟನೆ ನಡೆಸಿದ್ದಳು.
ನಿಯಮದ ಪ್ರಕಾರ, ವಿಧಾನ ಸೌಧ ಸುತ್ತಮುತ್ತ ಯಾರೂ ಕೂಡ ಪ್ರತಿಭಟನೆ ಅಥವಾ ಘೋಷಣೆ ಕೂಗುವ ಹಾಗಿಲ್ಲ. ಆದರೆ ಅಮೂಲ್ಯ ಲಿಯೋನ್ ನಿಷೇಧಿತ ಪ್ರದೇಶದಲ್ಲಿ 'ನೋ ಎನ್ಆರ್ಸಿ' ಎಂಬ ಬೋರ್ಡ್ ಹಿಡಿದು ವಿಧಾನ ಸೌಧದ ಮುಂದೆ ಧರಣಿ ಕುಳಿತಿದ್ದಳು.
ಸ್ಥಳಕ್ಕೆ ಬಂದ ವಿಧಾನಸೌಧ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಾಗ ಪೊಲೀಸರ ಜೊತೆಗೆ ನೂಕಾಟ, ತಳ್ಳಾಟ ಮಾಡಿದ್ದಳು. ನಂತರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಸದ್ಯ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿದ್ದ ಫೋಟೋಗಳು ಲಭ್ಯವಾಗಿದ್ದು ಎಲ್ಲಾ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.