ಬೆಂಗಳೂರು: ಕೊರೊನಾಗೆ ಸಂಬಂಧಿಸಿದ ಔಷಧ ಮಾರಾಟ ಮಾಡುವುದಾಗಿ ವೆಬ್ಸೈಟ್ನಲ್ಲಿ ಜಾಹೀರಾತು ಹಾಕಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಮೂವರು ನೈಜಿರಿಯಾ ಪ್ರಜೆಗಳನ್ನು ಹಿಡಿಯಲು ಹೋದ ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಇನ್ಸ್ಪೆಕ್ಟರ್ ಬೊಳೆತ್ತಿನ್ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ನೈಜೀರಿಯಾ ಮೂಲದ ಜಾನ್ ಒಬ್ಬೊಸ್ಸೆ, ಗಾಡ್ಸ್ ಟೈಮ್ಸ್ ಒಗ್ಚೂಕ್ವ, ಹಾಗೂ ಒಕಲೊಯಿಸೆ ಪ್ರಾಸಿಯಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಂಚಕರು ಫಾರ್ಮಸಿ ಕಂಪನಿ ಹೆಸರಿನಲ್ಲಿ ವೆಬ್ಸೈಟ್ ತೆರೆದು ಕೊರೊನಾ ಖಾಯಿಲಿಗೆ ಸಂಬಂಧಿಸಿದ ಸಿಪ್ಲಾ ಕಂಪನಿಯ ಔಷಧ ಮಾರಾಟ ಮಾಡುವುದಾಗಿ ಜಾಹೀರಾತು ಹಾಕಿ ಮೊಬೈಲ್ ನಂಬರ್ ನಮೂದಿಸಿದ್ದರು.
ಇದನ್ನೂ ಓದಿ: ಕೋವಿಡ್ ಟೆಸ್ಟ್ ವರದಿ ವಿಳಂಬ: ಸರ್ಕಾರದ ವಿವರಣೆಗೆ ಹೈಕೋರ್ಟ್ ಅಸಮಾಧಾನ
ಇತ್ತೀಚೆಗೆ ಸಾರ್ವಜನಿಕರು ಔಷಧಕ್ಕಾಗಿ ಕರೆ ಮಾಡಿದಾಗ ಆರೋಪಿಗಳ ಪೈಕಿ ಓರ್ವ ಡಾ.ಫಿಲಿಪ್ ಎಂದು ಪರಿಚಯಿಸಿಕೊಂಡಿದ್ದಾನೆ. ಮುಕೇಶ್ ಚಾಂದ್ ಎಂಬುವರ ಬ್ಯಾಂಕ್ ಖಾತೆಗೆ ಮುಂಗಡವಾಗಿ ಹಣ ಹಾಕಿಸಿಕೊಂಡಿದ್ದಾನೆ. ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ವಂಚಕರ ಪತ್ತೆಗಾಗಿ ಶೋಧ ನಡೆಸಿದಾಗ ಆರೋಪಿಗಳೆಲ್ಲರೂ ಮರಿಯಣ್ಣನಪಾಳ್ಯ ಮನೆಯೊಂದರಲ್ಲಿ ವಾಸವಾಗಿರುವುದನ್ನು ಪತ್ತೆ ಹಚ್ಚಿದ್ದರು. ವ್ಯವಸ್ಥಿತ ಯೋಜನೆ ರೂಪಿಸಿ ಮೇ 18ರಂದು ವಂಚಕರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಸಿಸಿಬಿ ಪೊಲೀಸರು ಎಂದು ಪರಿಚಯಿಸಿಕೊಂಡು ವಶಕ್ಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಂತೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಆರೋಪಿಗಳ ಮನೆ ಶೋಧಿಸಿದಾಗ ಮೂರು ಪಾಸ್ ಪೋರ್ಟ್ ಸಿಕ್ಕಿದ್ದು, ಆರೋಪಿಗಳು ನೈಜೀರಿಯಾ ಮೂಲದವರು ಎಂದು ಗೊತ್ತಾಗಿದೆ. ಹಲ್ಲೆ ಸಂಬಂಧ ಆರೋಪಿಗಳ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರು ದೂರು ನೀಡಿದ್ದಾರೆ.