ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ನಲ್ಲಿದ್ದ ವಿದೇಶಿ ಪ್ರಯಾಣಿಕರಿಂದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ದೇಣಿಗೆ ಸಂಗ್ರಹಿಸಿ, ವಲಸೆ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.
ವೈರಸ್ ವ್ಯಾಪಕವಾಗಿ ಹರಡದಂತೆ ಕ್ರಮ ಕೈಗೊಳ್ಳಲು ಅಮೃತಹಳ್ಳಿ ಪೊಲೀಸರು ಮುಂದಾಗಿದ್ದರು. ಲಾಕ್ಡೌನ್ ಪ್ರಾರಂಭಕ್ಕೂ ಮುನ್ನ ಹೊರ ರಾಷ್ಟ್ರಗಳಿಂದ ಬಂದಿದ್ದ ವಿದೇಶಿ ಪ್ರಯಾಣಿಕರ ಮೇಲೆ ನಿಗಾವಹಿಸಲು ಅವರ ಕೈಗಳಿಗೆ ಸೀಲ್ ಹಾಕಿ 14 ದಿನಗಳ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಇವರ ಚಲನವಲನಗಳ ಮೇಲೆ ಇಗ ಇಡಲು ಕಾನ್ಸ್ಟೇಬಲ್ ಚಂದ್ರಪ್ಪ ಚಿಕ್ಕಬಿದರಿ ಅವರಿಗೆ ವಹಿಸಲಾಗಿತ್ತು.
50 ವಿದೇಶಿ ಪ್ರಯಾಣಿಕರ ಮೇಲೆ ನಿರಂತರವಾಗಿ ನಿಗಾವಹಿಸಲು ವಾಟ್ಆ್ಯಪ್ ಗ್ರೂಪ್ ರಚಿಸಿದ್ದರು. ಈ ಮುಖೇನ ಪ್ರಯಾಣಿಕರ ಆಗು- ಹೋಗುಗಳ ಬಗ್ಗೆ ಗಮನಹರಿಸುತ್ತಿದ್ದರು. ಊಟವಿಲ್ಲದೆ ಪರದಾಡುತ್ತಿರುವ ವಲಸೆ ಕಾರ್ಮಿಕರ ಸಂಕಷ್ಟ ಕಂಡ ಚಂದ್ರಪ್ಪ ಅವರು, ಬಡವರಿಗೆ ನೆರವಾಗಲು ಇಚ್ಛಿಸುವವರು ದೇಣಿಗೆ ನೀಡಬಹುದು ಎಂದು ಕ್ವಾರಂಟೈನ್ನಲ್ಲಿದ್ದ ವಿದೇಶಿಯರ ಗ್ರೂಪ್ಗೆ ಸಂದೇಶ ಹಾಕಿದ್ದರು.
ಇದಕ್ಕೆ ಸ್ಪಂದಿಸಿದ ವಿದೇಶಿ ಪ್ರಯಾಣಿಕರು, ಸುಮಾರು 2.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಹಣದಿಂದ ಕಾನ್ಸ್ಟೇಬಲ್ ಚಂದ್ರಪ್ಪ, ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.