ಬೆಂಗಳೂರು: 2020-21ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ್ದು, ಈ ಬಾರಿಯ ಬಜೆಟ್ನಲ್ಲಿ ಕಳವಳ ಸೃಷ್ಟಿಸುವಂತ ಚಿಂತಾಜನಕ ಅಂಶಗಳಿವೆ. ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳ ನಡುವೆ ಬಜೆಟ್ ಮಂಡನೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಪೆಟ್ಟು ಬಿದ್ದಿದೆ. ಸಿಎಂ ಬಜೆಟ್ನಲ್ಲೂ ಇದನ್ನ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರದಿಂದ ಬರಬೇಕಿದ್ದ 8.887 ಕೋಟಿ ತೆರಿಗೆ ಹಣ ಕೋತಾ ಆಗಿದೆ. ಸೆಸ್ ಕಲೆಕ್ಷನ್ನಲ್ಲೂ 3 ಸಾವಿರ ಕೋತಾ ಆಗಿದ್ದು, ಒಟ್ಟು ರಾಜ್ಯಕ್ಕೆ ಬರಬೇಕಿದ್ದ 11,215 ಕೋಟಿ ರೂ. ಕೋತಾ ಆಗಿದೆ. ಇಷ್ಟು ದುಡ್ಡು ಬರದಿದ್ದರೆ ರಾಜ್ಯ ಏನು ಮಾಡೋದಕ್ಕೆ ಆಗುತ್ತೆ? ರಾಜ್ಯವೇನು ಹಣ ಪ್ರಿಂಟ್ ಮಾಡಲು ಆಗುತ್ತದೆಯೇ? ಬಿಜೆಪಿಯ ತಪ್ಪು ಆರ್ಥಿಕ ನೀತಿಯೇ ಇದಕ್ಕೆ ಕಾರಣ. ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡ ರಾಜ್ಯಗಳಿಗೆ ಶಿಕ್ಷೆ ಕೊಡುವ ರೀತಿ ಕೇಂದ್ರ ವರ್ತಿಸುತ್ತಿದೆ ಎಂದು ಕೇಂದ್ರದ ವಿರುದ್ಧ ಗುಂಡೂರಾವ್ ಹಾರಿಹಾಯ್ದರು.
ಅಲ್ಲದೆ, ದೇಶದ ಜಿಡಿಪಿಗಿಂತ ನಮ್ಮ ರಾಜ್ಯದ ಜಿಡಿಪಿ ಉತ್ತಮವಾಗಿದೆ. ಇಂತಹ ರಾಜ್ಯಕ್ಕೆ 11 ಸಾವಿರ ಕೋಟಿ ಉಳಿಸಿಕೊಂಡ್ರೆ ಹೇಗೆ? ಕೇಂದ್ರದ ಬಿಜೆಪಿ ಸರ್ಕಾರ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಆದ್ರೆ 25 ಸಾವಿರ ಕೋಟಿ ನಷ್ಟವಾಗಲಿದೆ. ಪ್ರತಿ ವರ್ಷ ಬಜೆಟ್ ಗಾತ್ರ ಹೆಚ್ಚಾಗಬೇಕು, ಆದ್ರೆ ಅದು ಆಗ್ತಿಲ್ಲ. ನಾವು ಸರಿಯಾದ ದಿಕ್ಕಿನಲ್ಲಿ ಹೋಗ್ತಿಲ್ಲ ಅಂತ ಬಜೆಟ್ ತೋರಿಸ್ತಿದೆ. ದೇಶದ ಆರ್ಥಿಕ ಪರಿಸ್ಥಿತಿಯಿಂದ ರಾಜ್ಯಕ್ಕೂ ಹೊಡೆತ ಬಿದ್ದಿದೆ. ಮುಖ್ಯಮಂತ್ರಿಗಳು ಕೇಂದ್ರದ ಜೊತೆ ಹೋರಾಟ ಮಾಡಿ ನ್ಯಾಯ ಕೊಡಿಸಬೇಕು.
ನಾವು ಎರಡು ವರ್ಷದ ಹಿಂದೆಯೇ 40 ಸಾವಿರ ಕೋಟಿ ಕೃಷಿಗೆ ಇಟ್ಟಿದ್ದೆವು. ಈಗ 32 ಸಾವಿರ ಕೋಟಿ ಇಟ್ಟಿದ್ದಾರೆ. ಬಜೆಟ್ ನೋಡಿದ್ರೆ ನಾಲ್ಕೈದು ಸಾವಿರ ಸಿಗಬಹುದು ಅಷ್ಟೇ. ಎತ್ತಿನಹೊಳೆಗೆ 1500 ಕೋಟಿ ಕೊಟ್ಟಿದ್ದಾರೆ. ನಾವಿದ್ದಾಗ ಎತ್ತಿನಹೊಳೆಗೆ 2.5 ಸಾವಿರ ಕೋಟಿ ಕೊಟ್ಟಿದ್ದೆವು. ಯಡಿಯೂರಪ್ಪ ನಾಮಕಾವಸ್ತೆ ಬಜೆಟ್ ಮಾಡಿದ್ರೆ ಏನು ಪ್ರಯೋಜನ? 1 ಲಕ್ಷದ 24 ಸಾವಿರ ರೈತರಿಗೆ ಇನ್ನೂ ಸಾಲಮನ್ನಾ ಪಾವತಿಯಾಗಿಲ್ಲ. ಇದಕ್ಕೆ ಹಣ ಇಟ್ಟಿದ್ದಾರಾ? ಇಲ್ಲವಾ? ಗೊತ್ತಿಲ್ಲ. ಹಿಂದುಳಿದ ವರ್ಗಗಳಿಗೆ ಮೂರ್ನಾಲ್ಕು ಅಭಿವೃದ್ಧಿ ನಿಗಮಗಳನ್ನು ಕೊಟ್ಟಿದ್ದಾರೆ. ಇದಕ್ಕೆ ಸ್ವಾಗತವಿದೆ. ಆದ್ರೆ ಉಳಿದ ನಿಗಮಗಳಿಗೆ ಏನು ಕೊಟ್ಟಿದ್ದೀರಿ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದರು.
ಅಲ್ಲದೆ, ಅಲ್ಪಸಂಖ್ಯಾತರ ಬಗ್ಗೆ ಬಜೆಟ್ನಲ್ಲಿ ಪ್ರಶ್ನೆಯೇ ಇಲ್ಲ. ಸರ್ವೋತೋಮುಖ ಅಭಿವೃದ್ಧಿ ಅಂದ್ರೆ ಏನು? ಬಜೆಟ್ನಲ್ಲಿ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ದೆಹಲಿ ಮಾದರಿಯಲ್ಲಿ ಶಾಲೆಗಳನ್ನು ನಿರ್ಮಿಸ್ತೀವಿ ಅಂತ ಸುರೇಶ್ ಕುಮಾರ್ ಹೇಳಿದ್ದಾರೆ. ಇದನ್ನು ಯಾವ ಗ್ರಾಂಟ್ನಲ್ಲಿ ಮಾಡ್ತಾರೆ. ಬೆಂಗಳೂರು ನಗರಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದಾರೆ. ಎರಡು ವರ್ಷದ ಹಿಂದೆಯೇ ಸಿದ್ದರಾಮಯ್ಯ ಅವರು 10 ಸಾವಿರ ಕೋಟಿ ಕೊಟ್ಟಿದ್ದರು. ಯಡಿಯೂರಪ್ಪ ನಮ್ಮ ಆಕ್ಷನ್ ಪ್ಲಾನ್ ಅನ್ನೇ ಚೇಂಜ್ ಮಾಡಿ ಮಂಡಿಸಿದ್ದಾರೆ. ಸುಮ್ನೆ ತೋರಿಸೋದಕ್ಕೆ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ್ದು 60 ಪರ್ಸೆಂಟ್ ಷೇರ್ ಇದೆ. ಅವರು ಯಾವಾಗ ಕೊಡ್ತಾರೆ. ಈ ಬಜೆಟ್ ಯಾರ ಪರ ಇಲ್ಲ. ರೈತರು, ವಿದ್ಯಾರ್ಥಿಗಳು, ಮಹಿಳೆಯರ ಪರ ಬಜೆಟ್ ಇಲ್ಲ.
ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಿಎಂ ಕೂಡಲೇ ಧ್ವನಿ ಎತ್ತಬೇಕು. ಅವರ 25 ಜನ ಸಂಸದರ ಜೊತೆ ನಾವೂ ಕೂಡ ಕೈ ಜೋಡಿಸ್ತೀವಿ. ಒಂದು ವರ್ಷದಲ್ಲಿ 12 ಸಾವಿರ ಕೋಟಿ ಕೇಂದ್ರ ಸರ್ಕಾರ ಕಳೆದು ಹಾಕಿದ್ರೆ ನಮ್ಮ ರಾಜ್ಯ ಎಲ್ಲಿಗೆ ಹೋಗಬೇಕು? ಒಟ್ಟಾರೆ ಹೇಳುವುದಾದರೆ ಇದೊಂದು ನಿರಾಶಾದಾಯಕ ಬಜೆಟ್. ಬಜೆಟ್ನಲ್ಲಿ ಏನೂ ಇಲ್ಲ ಎಂದರು.