ಬೆಂಗಳೂರು: ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳಿಂದ ಪಕ್ಷಕ್ಕಾಗುತ್ತಿರುವ ನಕಾರಾತ್ಮಕ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಈ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಕಾರ್ಯಕರ್ತರ ಅಸಮಾಧಾನ ಶಮನಗೊಳಿಸಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಬೇಕು ಎಂದು ರಾಜ್ಯ ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ ಪ್ರಮುಖರ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ ನಡೆಸಿದರು. ಈ ವೇಳೆ, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗೂ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಉಪಸ್ಥಿತರಿದ್ದರು.
ಯುವ ಮೋರ್ಚಾ ಕಾರ್ಯಕರ್ತರ ರಾಜೀನಾಮೆ: ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಯಿತು. ಯುವ ಮೋರ್ಚಾ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ ವಿಷಯವೂ ಚರ್ಚೆಗೆ ಬಂದಿದ್ದು, ಕೆಲ ನಾಯಕರು ಕಾರ್ಯಕರ್ತರ ವಿಚಾರದಲ್ಲಿ ಲಘುವಾಗಿ ಹೇಳಿಕೆ ನೀಡಿ ಕಾರ್ಯಕರ್ತರನ್ನು ಮತ್ತಷ್ಟು ಕೆರಳಿಸುವ ಘಟನೆ ನಡೆದಿರುವುದಕ್ಕೆ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದರು.
ಸಾಧನಾ ಸಮಾವೇಶ ರದ್ದು ಉತ್ತಮ ಬೆಳವಣಿಗೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಂತರ ಸರ್ಕಾರದ ಸಾಧನಾ ಸಮಾವೇಶ ರದ್ದು ಮಾಡಿದ ನಿರ್ಧಾರ ಒಳ್ಳೆಯ ಬೆಳವಣಿಗೆ, ಕಾರ್ಯಕರ್ತರು ಶೋಕದಲ್ಲಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸೂಕ್ತವಲ್ಲ. ಹಾಗಾಗಿ, ರಾಜ್ಯ ಘಟಕದ ನಡೆ ಸರಿಯಿದೆ. ಹಾಗಂತ ಸುಮ್ಮನೆ ಕೂರಬಾರದು, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯರಾಗಬೇಕು ಎಂದು ಸಲಹೆ ನೀಡಿದರು.
ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ: ಹಿಂದೂಪರ ಸಂಘಟನೆ ಮುಖಂಡರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಜೊತೆಗೆ ಇತರ ಕೋಮಿನ ರಾಜಕೀಯ ಕಾರಣದ ಹತ್ಯೆಗಳನ್ನೂ ಗಂಭೀರವಾಗಿ ಪರಿಗಣಿಸಬೇಕು, ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು, ಚುನಾವಣಾ ವರ್ಷದಲ್ಲಿ ಕಾನೂನು ಸುವ್ಯವಸ್ಥೆ ವಿಚಾರ ಬಹಳ ಮುಖ್ಯವಾಗಿರಲಿದೆ ಎಂದು ತಿಳಿಸಿದರು.
ಚುನಾವಣೆಗೆ ಸಿದ್ಧರಾಗಿ: 2023ರ ವಿಧಾನಸಭಾ ಚುನಾವಣೆ ಸಿದ್ಧತೆ ಬಗ್ಗೆಯೂ ರಾಜ್ಯ ನಾಯಕರ ಜೊತೆ ಅಮಿತ್ ಶಾ ಮಹತ್ವದ ಚರ್ಚೆ ನಡೆಸಿದರು. ಪಕ್ಷ ಸಂಘಟನೆ, ಕ್ಷೇತ್ರಗಳಲ್ಲಿನ ಸ್ಥಿತಿಗತಿ, ಹಾಲಿ ಶಾಸಕರ ಬಗ್ಗೆ ಜನರ ಅಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಇದರ ಜೊತೆ ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನ ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ರಾಜ್ಯ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಿದ್ದು, ಮುಂದೆ ಬರುತ್ತಿರುವ ಚುನಾವಣೆಗಳಿಗೆ ಸಿದ್ಧರಾಗಿ ಎಂದಿದ್ದಾರೆ ಎನ್ನಲಾಗಿದೆ.
ರಾಜೇಶ್ಗೆ ಶುಭ ಕೋರಿದ ಅಮಿತ್ ಶಾ: ಇನ್ನು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ರಾಜೇಶ್ ಕುಂತೂರ್ ಜೊತೆ ಅಮಿತ್ ಶಾ ಮಾತುಕತೆ ನಡೆಸಿದರು. ಪಕ್ಷ ಮತ್ತು ಸಂಘ ಪರಿವಾರದ ಕೊಂಡಿಯಾಗಿ ಕೆಲಸ ಮಾಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ, ಬಿ.ಎಲ್.ಸಂತೋಷ್, ಅರುಣ್ ಕುಮಾರ್ ನಂತರ ಚುನಾವಣಾ ಸಮಯದಲ್ಲಿ ಆ ಸ್ಥಾನಕ್ಕೆ ಬಂದಿದ್ದೀರಿ, ಬಹಳ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಇದರಲ್ಲಿ ನೀವೇ ಸಫಲರಾಗಬೇಕು ಎಂದು ಶುಭ ಕೋರಿದರು.
ಸಚಿವ ಸಂಪುಟ ವಿಸ್ತರಣೆ : ಬೆಳಗ್ಗೆ ನಡೆದ ಚರ್ಚೆ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆದಿಲ್ಲ ಎನ್ನಲಾಗಿದೆ. ಕೇವಲ ಸಂಘಟನಾತ್ಮಕ ವಿಚಾರಗಳ ಕುರಿತು ಮಾತ್ರ ಸಭೆ ನಡೆದಿದ್ದು, ಮಧ್ಯಾಹ್ನ ಭೋಜನ ಕೂಟದಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ಸಿಎಂ ಬೊಮ್ಮಾಯಿ..!