ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಜೂಜಾಟ ನಿಷೇಧಿಸುವ ಮಹತ್ವದ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಡಿಸಿದರು.
ಆನ್‌ಲೈನ್ ಜೂಜು, ಬೆಟ್ಟಿಂಗ್‌ಗಳಿಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಜೂಜು ಹಾಗೂ ಬೆಟ್ಟಿಂಗ್ ಸೇರಿದಂತೆ ಹಣ ನೀಡಿ ಗಳಿಸುವ ಟೋಕನ್‌ಗಳನ್ನು ಬಳಸಿ ಆಡುವ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜು ನಿಷೇಧಿಸಲು ಹಾಗೂ ಆನ್‌ಲೈನ್ ಜೂಜಾಟ ನಡೆಸುವವರಿಗೆ ದಂಡ ವಿಧಿಸಲು ಈ ವಿಧೇಯಕದಲ್ಲಿ ಅವಕಾಶವಿದೆ.
3 ವರ್ಷ ಶಿಕ್ಷೆ, 1 ಲಕ್ಷ ರೂ ದಂಡ:
ಆನ್‌ಲೈನ್ ಜೂಜಾಟದಲ್ಲಿ ತೊಡಗುವ ಪ್ರಕರಣವನ್ನು ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಅಪರಾಧ ಸಾಬೀತಾದಲ್ಲಿ ಈ ಹಿಂದೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ಇತ್ತು. ಈಗ ಅದನ್ನು ಮೂರು ವರ್ಷಕ್ಕೆ ಶಿಕ್ಷೆ ಹೆಚ್ಚಿಸಲಾಗಿದೆ. 1 ಲಕ್ಷ ರೂ. ದಂಡ ವಿಧಿಸುವ ಅವಕಾಶವನ್ನು ಹೊಸ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.
ಲಾಟರಿ, ಕುದುರೆ ರೇಸ್ ಮಸೂದೆ ವ್ಯಾಪ್ತಿಯಲ್ಲಿಲ್ಲ:
ಈ ಆನ್‌ಲೈನ್ ಜೂಜಾಟ ನಿಷೇಧ ತಿದ್ದುಪಡಿ ಮಸೂದೆಯಡಿ ಲಾಟರಿ ಮತ್ತು ಕುದುರೆ ರೇಸ್‌ಗಳು ಬರುವುದಿಲ್ಲ. ಲಾಟರಿ ಮತ್ತು ಕುದುರೆ ರೇಸ್ ಅನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಅಂಶಗಳು ವಿಧೇಯಕದಲ್ಲಿವೆ.