ಬೆಂಗಳೂರು: ತುಮಕೂರು ಕ್ಷೇತ್ರದಿಂದ ನಾಮಪತ್ರ ವಾಪಸ್ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಮುದ್ದಹನುಮೇಗೌಡರ ಮನವೊಲಿಕೆ ಯತ್ನ ನಡೆಸಿದರು.
ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿದ್ದ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವೊಲಿಸುವ ಪ್ರಯತ್ನ ಮಾಡಿದರು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಹಿನ್ನೆಲೆ ಕಾಂಗ್ರೆಸ್ ನಾಯಕರು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಮುದ್ದಹನುಮೇಗೌಡರ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್, ಸೀಟು ಹಂಚಿಕೆ ಚರ್ಚೆ ಆದಾಗಿನಿಂದ ತುಮಕೂರು ಬಿಟ್ಟುಕೊಡಬೇಕು ಅಂದಾಗ ಆತಂಕ ಆಗಿತ್ತು. ಕಳೆದ ಚುನಾವಣೆಯಲ್ಲಿ ಮುದ್ದಹನುಮೇಗೌಡ್ರನ್ನ ಗೆಲ್ಲಿಸಿದ್ರು. ಐದು ವರ್ಷ ಸಂಸದ ಅನ್ನೋದನ್ನ ಬಿಟ್ಟು ಕಾರ್ಯಕರ್ತರಾಗಿ ಜನಮನ್ನಣೆ ಗಳಿಸಿದ್ರು. ಈ ಬಾರಿಯೂ ಗೆದ್ದು ಬರ್ತಾರೆ ಅಂತ ನಮ್ಮೆಲ್ಲರಿಗೂ ಗೊತ್ತಿತ್ತು. ಆದ್ರೆ ಈಗ ನಮಗೆ ಆಘಾತ ಆಗಿದೆ. ಅವರನ್ನು ಮನವೊಲಿಸುವ ಕೆಲಸ ಮಾಡಿದ್ದೇವೆ. ಬೆಂಬಲಿಗರ ಒತ್ತಡಕ್ಕೆ ಮಣಿದು ನಾಮಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ರಾಹುಲ್ ಹಾಗೂ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ಗೆ ಹೇಳಿದ್ವಿ. ಅವರು ಹೇಗಾದ್ರೂ ಮಾಡಿ ಮನವೊಲಿಸಿ ಅಂತ ತಿಳಿಸಿದ್ರು. ನಮ್ಮ ಮಾತಿಗೆ ಹಾಗೂ ರಾಹುಲ್ ಗಾಂಧಿ ಮಾತಿಗೆ ಗೌರವ ಕೊಟ್ಟು ಮುದ್ದಹನುಮೇಗೌಡರು ನಾಮಪತ್ರ ವಾಪಸ್ ತೆಗೆದುಕೊಳ್ಳುವ ವಿಶ್ವಾಸ ಇದೆ. ಅವರು ಕೂಡ ಏಕಾಏಕಿ ತೀರ್ಮಾನ ಮಾಡೋದಕ್ಕೆ ಆಗಲ್ಲವೆಂದು ತಿಳಿಸಿದರು.
ಚರ್ಚೆ ಮಾಡಿ ತೀರ್ಮಾನ:
ಬಳಿಕ ಮಾತನಾಡಿದ ಮುದ್ದಹನುಮೇಗೌಡರು, ಬೆಂಗಳೂರು ಉತ್ತರದಲ್ಲಿ ನಿಲ್ಲುವಂತೆ ಮುಖಂಡರು ಮನವಿ ಮಾಡಿದ್ರು. ಆದ್ರೆ ನಾನು ತುಮಕೂರಿನಿಂದ ಆಯ್ಕೆಯಾಗಿರೋದು. ಇಲ್ಲಿ ಬಂದು ನಿಲ್ಲೋದು ಸರಿಯಿಲ್ಲ ಅಂತ ಬೇಡ ಅಂದೆ. ಮುಖಂಡರು ಇಟ್ಟಿರುವ ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ ಎಂದರು.
ಪಕ್ಷದ ಹಿರಿಯ ನಾಯಕರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ ಈಗಾಗಲೇ ನನ್ನ ಬಳಿ ಮಾತನಾಡಿದ್ದಾರೆ. ನನ್ನನ್ನು ಗೆಲ್ಲಿಸಿದವರ ಅಭಿಪ್ರಾಯದಂತೆ ನಾಮಪತ್ರ ಸಲ್ಲಿಸಿದ್ದೇನೆ. ನಮ್ಮ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದುಕೊಳ್ಳಬೇಕು. ನಮ್ಮನ್ನು ಕಾಪಾಡುವ ಮುಖಂಡರು, ಬೆಂಬಲಿಗರ ಅಭಿಪ್ರಾಯ ಕೇಳೋದು ನನ್ನ ಜವಾಬ್ದಾರಿ. ನನ್ನ ಬೆನ್ನೆಲುಬಾಗಿ ಸಾವಿರಾರು ಮಂದಿ ಕೆಲಸ ಮಾಡ್ತಿದ್ದಾರೆ. ತುಮಕೂರಲ್ಲಿ ಹಲವು ಮುಖಂಡರು ಕಾಯ್ತಾ ಇದ್ದಾರೆ. ಅಲ್ಲಿ ಹೋಗಿ ಅವ್ರ ಜೊತೆ ಚರ್ಚೆ ಮಾಡಿ ನಿರ್ಧಾರ ತಿಳಿಸುವೆ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗುವಂತ ಕೆಲಸ ಮಾಡಲ್ಲವೆಂದು ಮುದ್ದಹನುಮೇಗೌಡರು ಸ್ಪಷ್ಟಪಡಿಸಿದರು.