ಬೆಂಗಳೂರು : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬಲಗೊಳಿಸಲು ಎಲ್ಲಾ ಸಮಿತಿಗಳ ಅಧ್ಯಕ್ಷರನ್ನು ಹೊರತುಪಡಿಸಿ ಇನ್ನುಳಿದ ಪದಾಧಿಕಾರಿಗಳನ್ನು ವಿಸರ್ಜನೆಗೊಳಿಸಲಾಗಿದೆ. ಅಲ್ಲದೇ, ಕೋರ್ ಕಮಿಟಿಯಲ್ಲಿ 11 ರಿಂದ 14 ಸದಸ್ಯರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚನೆ ಮಾಡುವ ಕುರಿತು ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯ ಸಮಿತಿ, ಜಿಲ್ಲಾ, ತಾಲೂಕು ಸಮಿತಿ,ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಎಲ್ಲಾ ಸಮಿತಿಗಳ ಅಧ್ಯಕ್ಷರನ್ನು ಹೊರತುಪಡಿಸಿ ಇನ್ನುಳಿದ ಪದಾಧಿಕಾರಿಗಳನ್ನು ವಿಸರ್ಜನೆಗೊಳಿಸಲಾಯಿತು.
ಸಭೆಯ ಬಳಿಕ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಎಲ್ಲಾ ಸಮಿತಿಗಳನ್ನು ವಿಸರ್ಜನೆಗೊಳಿಸಿರುವುದನ್ನು ಖಚಿತ ಪಡಿಸಿದರು. ಶೀಘ್ರದಲ್ಲಿಯೇ ಎಲ್ಲಾ ಸಮಿತಿಗಳಿಗೆ ಹೊಸದಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.
ಪಕ್ಷದ ಪ್ರಮುಖ ನಾಯಕರನ್ನೊಳಗೊಂಡ ಕೋರ್ ಕಮಿಟಿ ರಚನೆ ಮಾಡುವ ಸಂಬಂಧ ಗಂಭೀರವಾಗಿ ಮಾತುಕತೆ ನಡೆಸಲಾಯಿತು. ಕೋರ್ ಕಮಿಟಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಹಿರಿಯ ನಾಯಕ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪೂರ, ಸಾ.ರಾ. ಮಹೇಶ್, ವೈ.ಎಸ್.ವಿ. ದತ್ತ ಸೇರಿದಂತೆ ಇತರೆ ಮುಖಂಡರನ್ನು ಸದಸ್ಯರನ್ನಾಗಿಸುವ ಕುರಿತು ಮಾತುಕತೆ ನಡೆಸಲಾಗಿದೆ.
ಓದಿ-ಮಹಿಳೆಯರನ್ನ ಕಂಡರೆ ಮರ, ಕಲ್ಲಿನ ಕಂಬ ತಬ್ಬಿಕೊಳ್ಳುತ್ತಿದ್ದ ವಿಕೃತ ಕಾಮಿಯ ಬಂಧನ
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಮಾಜಿ ಸಂಸದ ಕುಪೇಂದ್ರ ರೆಡ್ಡಿ ಸೇರಿದಂತೆ ಇತರರು ವಿಶೇಷ ಆಹ್ವಾನಿತರಾಗಲಿದ್ದಾರೆ. 11 ಸದಸ್ಯರನ್ನು ಕೋರ್‌ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ಇನ್ನು ಕೆಲವರನ್ನು ಸೇರಿಸುವುದಾದರೆ ಗರಿಷ್ಠ 14 ಸದಸ್ಯರು ಮಾತ್ರ ಇರುವಂತೆ ಕೋರ್ ಕಮಿಟಿ ರಚನೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಒಂದೆರಡು ದಿನದಲ್ಲಿ ಕೋರ್ ಕಮಿಟಿ ಸದಸ್ಯರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ.
ಸಭೆಗೆ 35 ಜನರನ್ನು ಆಹ್ವಾನಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಕೆಲವರು ಗೈರಾಗಿದ್ದು, 32 ಮಂದಿ ಹಾಜರಾಗಿದ್ದರು. ನಾಯಕರಾದ ವೈ.ಎಸ್.ವಿ. ದತ್ತ ಅವರು ಕೌಟುಂಬಿಕ ಕಾರಣದಿಂದಾಗಿ ಗೈರಾಗಿದ್ದರೆ, ಜಫ್ರುಲ್ಲಾ ಖಾನ್ ಅವರು ದುಬೈನಲ್ಲಿ ಇರುವ ಕಾರಣ ಸಭೆಗೆ ಹಾಜರಾಗಿರಲಿಲ್ಲ. ದೇವಾನಂದ ಚೌವ್ಹಾಣ್ ಅವರು ವೈಯಕ್ತಿಕ ಕಾರಣದಿಂದಾಗಿ ಗೈರಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರೋಗ ಇದ್ರೆ ಚಿಕಿತ್ಸೆ ಕೊಡಿಸಿ ವಾಸಿ ಮಾಡಬಹುದು. ಆದರೆ, ರೋಗ ಬಂದವರ ಹಾಗೆ ನಾಟಕ ಮಾಡುವವರಿಗೆ ಹೇಗೆ ಚಿಕಿತ್ಸೆ ಕೊಡೋದು. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದ್ದಲ್ಲಿ ಬಗೆಹರಿಸುತ್ತೇವೆ. ಪಕ್ಷದ ಮೇಲೆ ನಿಷ್ಠೆ ಇರೋರು ಯಾರೂ ಬಿಟ್ಟು ಹೋಗೋದಿಲ್ಲ, ಹೋಗೋರನ್ನು ತಡೆಯೋದಿಲ್ಲ. ಪಕ್ಷದಲ್ಲಿ ಈಗಲೂ ನಿಷ್ಠಾವಂತರು ಇದ್ದಾರೆ. ಯಾವ ಪಕ್ಷದ ಮನೆ ಬಾಗಿಲಿಗೂ ಬನ್ನಿ ಅಂತಾ ಹೋಗೋದಿಲ್ಲ. ಅವರಾಗಿಯೇ ಬಂದರೆ ಸೇರಿಸಿಕೊಳ್ತೇವೆ. ಸಿಎಂ ಇಬ್ರಾಹಿಂ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಏನಾದರೂ ಜವಾಬ್ದಾರಿ ಕೊಡಬೇಕಲ್ಲಾ? ಸುಮ್ಮಸುಮ್ಮನೆ ಕರೆಸಿಕೊಳ್ಳೋಕೆ ಆಗುತ್ತಾ ಎಂದು ಹೇಳಿದರು.