ಬೆಂಗಳೂರು: ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಹಾಗೂ ಪಕ್ಷದ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಲು ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ವೀಕ್ಷಕರಾದ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಈಗಾಗಲೇ 50ಕ್ಕೂ ಅಧಿಕ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರವರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದು ರಾಷ್ಟ್ರೀಯ ನಾಯಕರು ಸ್ಪಷ್ಟಪಡಿಸಿದರು.
ಸಿಎಲ್ಪಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಕ್ಕೆ ಸಿದ್ದರಾಮಯ್ಯ ತಮ್ಮ ಸ್ಪಷ್ಟನೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ರಾಜೀನಾಮೆ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ ಅವರ ಮನವೊಲಿಕೆ ಪ್ರಯತ್ನ ನಡೆದಿದೆ. ಮಧುಸೂದನ್ ಮಿಸ್ತ್ರಿ, ಭಕ್ತಚರಣ್ ದಾಸ್ ಮನವಿ ಮಾಡಿದ್ದು, ಉಪಚುನಾವಣೆ ಸೋಲಿಗೆ ಧೃತಿಗೆಡಬೇಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದಲ್ಲಿ ನೀವು ಹಿರಿಯ ನಾಯಕರು. ಹಲವು ಚುನಾವಣೆಗಳನ್ನ ಎದುರಿಸಿದ್ದೀರಾ. ಸೋಲಿಗೆ ನೀವೊಬ್ಬರೇ ಕಾರಣರಲ್ಲ. ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ನೀವೇ ಮುಂದುವರಿಯಿರಿ. ಒಂದೊಮ್ಮೆ ರಾಜೀನಾಮೆ ನಿರ್ಧಾರಕ್ಕೆ ಬದ್ಧವಾಗಿದ್ದರೆ ಅದನ್ನು ಸ್ಪಷ್ಟಪಡಿಸಿ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಾದರೆ ಬದಲಾಯಿಸೋಣ. ಪಕ್ಷವನ್ನ ಬಲಪಡಿಸುವತ್ತ ಹೆಚ್ಚಿನ ಗಮನಹರಿಸಿ ಎಂದು ಸಿದ್ದರಾಮಯ್ಯ ಅವರಿಗೆ ಮಧುಸೂದನ್ ಮಿಸ್ತ್ರಿ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.
ಆದರೆ, ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ. ನನಗೂ ವಯಸ್ಸಾಗಿದೆ. ಮೊದಲಿನಂತೆ ಓಡಾಟ ಕಷ್ಟ. ಮೊನ್ನೆಯಷ್ಟೇ ಹೃದಯ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಪಕ್ಷದಲ್ಲಿ ಸಮರ್ಥರಿದ್ದಾರೆ, ಯುವಕರಿಗೆ ಆದ್ಯತೆ ನೀಡೋಣ. ಬೇರೆಯವರಿಗೆ ಅವಕಾಶ ಮಾಡಿಕೊಡಿ. ಇದನ್ನೇ ಸೋನಿಯಾ ಗಾಂಧಿ ಅವರ ಬಳಿಯೂ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.