ಯಲಹಂಕ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ(GKVK) ಹಮ್ಮಿಕೊಂಡಿರುವ ಕೃಷಿ ಮೇಳ-2021 ಅನ್ನು ಹೆಚ್.ಡಿ.ಕೋಟೆಯ ಹಾಡಿಯೊಂದರ ಕೃಷಿ ಸಾಧಕಿ ಪ್ರೇಮಾ ಉದ್ಘಾಟಿಸಿ, 4 ದಿನಗಳ ಕಾಲ ನಡೆಯುವ ಮೇಳಕ್ಕೆ ಗುರುವಾರ ವಿದ್ಯುಕ್ತ ಚಾಲನೆ ನೀಡಿದರು.
ಯಲಹಂಕದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹಾಡಿಯೊಂದರ ರೈತ ಸಾಧಕಿಯಾದ ಪ್ರೇಮಾ ಅವರಿಗೆ ಕಾರ್ಯಕ್ರಮದ ಉದ್ಘಾಟನಾಭಾಗ್ಯ ದೊರೆತಿದೆ. ಈ ವೇಳೆ ವಿವಿಯ ಕುಲಪತಿಗಳಾದ ಡಾ.ಎಸ್.ರಾಜೇಂದ್ರ ಪ್ರಸಾದ್, ನಿವೃತ್ತ ಕುಲಪತಿಗಳಾದ ಡಾ.ಎಸ್.ಅಯ್ಯಪ್ಪನ್, ಎಸ್.ಆರ್. ಉಮಾಶಂಕರ್, ಬ್ರಿಜೇಶ್ ಕುಮಾರ್, ದಿಕ್ಷೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೃಷಿ ಮೇಳಕ್ಕೂ ಬಿಟ್ ಕಾಯಿನ್ ಬಿಸಿ
ರಾಜ್ಯ ರಾಜ್ಯಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್ ಕಾಯಿನ್(Bitcoin) ಬಿಸಿ ಕೃಷಿ ಮೇಳಕ್ಕೂ ತಟ್ಟಿದೆ. ಕೃಷಿ ಮೇಳ-2021 ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇವರಲ್ಲದೇ, ಸಚಿವರಾದ ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್, ಶಂಕರ್ ಬಿ.ಪಾಟೀಲ್ ಮುನ್ನೇನಕೊಪ್ಪ, ಶಾಸಕ ಕೃಷ್ಣಬೈರೇಗೌಡ ಕೂಡ ಕಾರ್ಯಕ್ರಮದಿಂದ ವಿಮುಖರಾಗಿದ್ದರು. ಕಾರ್ಯಕ್ರಮದಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಭಾಗಿಯಾಗದೆ ಇರುವುದು ಕೃಷಿ ಮೇಳದ ಬಗ್ಗೆ ಸರ್ಕಾರಕ್ಕಿರುವ ನಿರಾಸಕ್ತಿಯನ್ನ ತೋರಿಸುತ್ತದೆ ಎಂಬ ಆರೋಪ ಕೇಳಿಬಂದಿದೆ.
ಮೇಳಕ್ಕೆ ಅಡ್ಡಿಯಾದ ಜಡಿ ಮಳೆ
ಬೆಂಗಳೂರಿನಲ್ಲಿ ಕಳೆದು ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಜಡಿಮಳೆ ಶುರುವಾಗಿದೆ. ಜಡಿಮಳೆ ಕೃಷಿ ಮೇಳದ ಮೇಲೂ ಪರಿಣಾಮ ಬೀರಿದೆ. ವಸ್ತು ಪ್ರದರ್ಶನ ಮಳಿಗೆಗಳಿಗೆ ಹೋಗುವ ರಸ್ತೆಗಳು ಕೆಸರುಮಯವಾಗಿವೆ. ಇನ್ನೂ ಮಳೆಯಿಂದ ಜನರು ಸಹ ಕೃಷಿ ಮೇಳಕ್ಕೆ ಬರಲು ನಿರುತ್ಸಾಹ ತೋರಿದ್ದಾರೆ.