ಬೆಂಗಳೂರು: ನಟಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ ಅವರ ತಾಯಿ ಇತ್ತೀಚೆಗೆ ವಿಧಿವಶರಾಗಿದ್ದಾರೆ. ಇಂದು ಅಮ್ಮಂದಿರ ದಿನದ ಅಂಗವಾಗಿ ಬಡ ಮತ್ತು ಅನಾಥ ಮಹಿಳೆಯರಿಗೆ ಬಟ್ಟೆ ಹಾಗೂ ಅನ್ನದಾನ ಮಾಡುವ ಮೂಲಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಅಲ್ಲದೇ, ನಗರದ ಕಾಕ್ಸ್ ಟೌನ್ ಗಂಗಮ್ಮ ದೇವಸ್ಥಾನದಲ್ಲಿ ಭಾರತೀನಗರ ನಾಗರಿಕರ ವೇದಿಕೆ ಅಧ್ಯಕ್ಷ ಎನ್.ಎಸ್.ರವಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಬಾಗಿನ ನೀಡಿದರು.
ಕಳೆದ ವಾರ ನಟಿ ತಾರಾ ಅನುರಾಧಾ ಅವರ ತಾಯಿ ಪುಷ್ಪಾ ದೈವಾಧೀನರಾಗಿದ್ದರು. ನಿನ್ನೆಯಷ್ಟೇ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮವೂ ನಡೆಯಿತು. ಇಂದು ಅಮ್ಮಂದಿರ ದಿನದ ಹಿನ್ನೆಲೆ ಬಡ ಮತ್ತು ಅನಾಥ ಮಹಿಳೆಯರಿಗೆ ತಾರಾ ಬಟ್ಟೆಗಳನ್ನು ವಿತರಿಸುವ ಮೂಲಕ ಅಗಲಿದ ಅಮ್ಮನನ್ನು ನೆನೆದರು.
ಬಳಿಕ ಮಾತಾನಡಿದ ತಾರಾ ಅವರು, ಇದು ಅಮ್ಮನಿಲ್ಲದ ಮೊದಲ ಅಮ್ಮಂದಿರ ದಿನವಿದು. ನಿನ್ನೆಯಷ್ಟೇ ಅವರ ವೈಕುಂಠ ಸಮರಾಧನೆಯನ್ನು ಮಾಡಿದ್ದೇವೆ. ಅಮ್ಮ ದೈಹಿಕವಾಗಿಲ್ಲ ಅನ್ನೋ ಸಂಕಟ ಇದೆ. ಮಾನಸಿಕವಾಗಿ ಅವರು ನನ್ನ ಜೊತೆಗೆ ಇದ್ದಾರೆ. ಹೀಗಾಗಿ ಇವತ್ತು ತಾಯಂದಿರಿಗೆ ಬಾಗಿನ ಕೊಟ್ಟು ಅವರ ಆಶೀರ್ವಾದ ಪಡೆದಿದ್ದೇನೆ ಎಂದರು.
ಓದಿ: ಎಳನೀರು ಮಾರಾಟ.. ಕುಟುಂಬ ನಿರ್ವಹಣೆ ಜೊತೆ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ ಮಹಾತಾಯಿ