ಬೆಂಗಳೂರು: ನಟ ಜಗ್ಗೇಶ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಜಗ್ಗೇಶ್ ಕಳೆದ ಬಾರಿ ಕೊನೆ ಅವಧಿಯಲ್ಲಿ ಅಲ್ಲಿ ಟಿಕೆಟ್ ಪಡೆದವರು. ಅವ್ರು ಹೆಚ್ಚು ಓಡಾಡಲು ಆಗಿರಲಿಲ್ಲ. ಅಲ್ಲದೇ ಅದು ಅವರ ಸ್ವ ಕ್ಷೇತ್ರವೂ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆ ಸಂದರ್ಭದಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಕ್ಕಿರಲಿಲ್ಲ, ಹಾಗಾಗಿ ಜಗ್ಗೇಶ್ ಅವರಿಗೆ ಟಿಕೆಟ್ ಕೊಡಲಾಗಿತ್ತು ಎಂದಿರುವ ಶೋಭಾ, ಜಗ್ಗೇಶ್ ಚುನಾವಣಾ ಪ್ರಚಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಲಾಭ ಆಗುತ್ತೆ, ಖುಷಿಯಾಗುತ್ತೆ. ಅವರು ಚಲನಚಿತ್ರ ನಟರು, ಯಶವಂತಪುರ ಕ್ಷೇತ್ರವಲ್ಲದೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರಿಂದ ಲಾಭ ಆಗುತ್ತೆ. ಅವರು ಬರುವ ವಿಶ್ವಾಸವಿದೆ ಎಂದು ತಿಳಿಸಿದರು.
ಸಂಜೆ 6ಕ್ಕೆ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ ಸಭೆ:
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಕಂಡ ಕೂಡಲೇ ಬಿಜೆಪಿಯ ನಾಯಕರು ಸಂಜೆ 6ಕ್ಕೆ ನಾಗದೇವನಹಳ್ಳಿಯಲ್ಲಿ ತಳಮಟ್ಟದ ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಎಸ್.ಟಿ. ಸೋಮಶೇಖರ್ ಜೊತೆ ಬಂದ ಕಾರ್ಯಕರ್ತರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಇಬ್ಬರ ನಡುವೆ ಸ್ನೇಹ ಹಾಗೂ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಬೇಕೆಂದು ಸೂಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.