ಬೆಂಗಳೂರು : ಪೊಲೀಸರು ಎಂದು ಹೇಳಿ ಮನೆಯಿಂದ ಹಣ ಒಡವೆ ತೆಗೆದುಕೊಂಡು ಹೋಗಿದ್ದ ಐವರ ಗ್ಯಾಂಗ್ ಅನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ. ಹೊಸ ವರ್ಷದ ಆಚರಣೆಗೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್ ನೀಡಿದ್ದ ಖದೀಮರ ಪ್ರಕರಣ ಮಹಾಲಕ್ಷ್ಮಿಲೇಔಟ್ ಪೊಲೀಸರ ನಿದ್ದೆಗೆಡಿಸಿತ್ತು. ಕೊನೆಗೂ ಕಳ್ಳರನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಡಿಸೆಂಬರ್ 31ರಂದು ಮಹಾಲಕ್ಷ್ಮಿಲೇಔಟ್ ಬಳಿಯ ಭೋವಿಪಾಳ್ಯದಲ್ಲಿ ನಡೆದ ಘಟನೆಯಿದು. ಸಮಯನಾಯ್ಕ್ ಎಂಬುವರ ಮನೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿದ್ದ ಗ್ಯಾಂಗ್, ನಾವು ತಿಪಟೂರು ಪೊಲೀಸರು, ನಿಮ್ಮ ಮನೆ ಸರ್ಚ್ ಮಾಡಬೇಕು, ಇವನೊಬ್ಬ ಕಳ್ಳ, ಕದ್ದ ಮಾಲನ್ನು ನಿಮಗೆ ಕೊಟ್ಟಿದ್ದಾನಂತೆ ಎಂದು ಒಬ್ಬನನ್ನು ತೋರಿಸಿ ಥೇಟ್ ಪೊಲೀಸರ ರೀತಿ ದಾಳಿ ಮಾಡಿದ್ದರು.
ಇದಕ್ಕೆ ಮನೆಯವರು ತಕರಾರು ತೆಗೆದಾಗ ಗನ್ ತೋರಿಸಿ ದರೋಡೆಕೋರರು ಮನೆಯವರ ಬಾಯಿ ಮುಚ್ಚಿಸಿದ್ದರು ಎಂದು ಪ್ರಕರಣದ ಕುರಿತು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಬಳಿಕ ಫೋನ್ಗಳನ್ನು ಕಿತ್ತುಕೊಂಡು ಎರಡು ಗಂಟೆ ಕಾಲ ಮನೆ ಶೋಧ ನಡೆಸಿದ್ದ ಕಳ್ಳರ ಗ್ಯಾಂಗ್, ಅಲ್ಲಿದ್ದ 19 ಲಕ್ಷ ರೂ. ನಗದು, 500 ಗ್ರಾಂ ಚಿನ್ನಾಭರಣವನ್ನು ಪೊಲೀಸರಂತೆ ಜಪ್ತಿ ಮಾಡಿದ್ದರು. ಸೂಟ್ಕೇಸ್ನಲ್ಲಿ ಹಣ, ಒಡವೆಯೊಂದಿಗೆ ಸಮಯನಾಯ್ಕ್ ಅವರ ಪುತ್ರ ಮಂಜುನಾಥ್‌ನನ್ನು ಜೊತೆಗೆ ಕರೆದುಕೊಂಡು ಹೊರಟು ಹೋಗಿದ್ದರು.
ಮಂಜುನಾಥ್‌ನನ್ನು ಠಾಣೆಗೆ ಕರೆದೊಯ್ಯೋದಾಗಿ ಕಾರಿಲ್ಲಿ ಕೂರಿಸಿಕೊಂಡಿದ್ದ ದರೋಡೆಕೋರರು ಮಹಾಲಕ್ಷ್ಮಿಲೇಔಟ್, ಬಿಇಎಲ್ ಸರ್ಕಲ್, ಎಂ.ಎಸ್. ಪಾಳ್ಯ ಸುತ್ತಾಡಿಸಿ 20 ಲಕ್ಷ ರೂ. ಹಣ ಕೊಟ್ಟರೆ ಜಪ್ತಿ ಮಾಡಿದ ಒಡವೆ ಕೊಟ್ಟು ಕೇಸ್ ಕೂಡ ಹಾಕಲ್ಲ ಎಂದು ಡೀಲ್ ಕುರಿತು ಮಾತನಾಡಿದ್ದರು.
ಇದಕ್ಕೆ ಮಂಜುನಾಥ್ ನಿರಾಕರಿಸಿದ್ದಕ್ಕೆ ಜಪ್ತಿ ಮಾಡುವ ನೆಪದಲ್ಲಿ ರಾಬರಿ ಮಾಡಿದ್ದ 500 ಗ್ರಾಂ ಚಿನ್ನಾಭರಣ, 19 ಲಕ್ಷ ರೂ. ನಗದು ತೆಗೆದುಕೊಂಡು, ಠಾಣೆಗೆ ಕರೆದಾಗ ಬರಬೇಕು ಎಂದು ಹೇಳಿ ಮಂಜುನಾಥ್‌ನನ್ನು ಬಿಟ್ಟು ಹೋಗಿದ್ದರು. ನಂತರ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ರಾಬರಿ ಮಾಡಿರುವುದೆಂಬುದು ಕುಟುಂಬಕ್ಕೆ ಗೊತ್ತಾಗಿದೆ.
ಸಂಬಂಧಿಕನಿಂದಲೇ ಸುಲಿಗೆಗೆ ಪ್ಲಾನ್ : ಕೃತ್ಯವನ್ನು ಸಮಯನಾಯ್ಕರ್ ಸಂಬಂಧಿ ರಾಹುಲ್ ಅಲಿಯಾಸ್ ದೀಪು ಪ್ಲಾನ್ ಮಾಡಿದ್ದ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಹಣ ಮಾಡುವ ಉದ್ದೇಶದಿಂದ ತನ್ನ ಸ್ನೇಹಿತರನ್ನು ಕಳುಹಿಸಿ ಈ ಕೆಲಸ ಮಾಡಿಸಿದ್ದ. ಈಗ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿ ಶೀಟರ್ ಸೇರಿ ಒಟ್ಟು ಐವರು ಅರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಇನ್ಸ್ಪೆಕ್ಟರ್ ಕಾಂತರಾಜು ಆ್ಯಂಡ್ ಟೀಂ ಅರೆಸ್ಟ್ ಮಾಡಿರುವುದನ್ನ ಡಿಸಿಪಿ ವಿನಾಯಕ್ ಪಾಟೀಲ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಎಮ್ಮೆ ಓಡಿಸುವ ಸ್ಪರ್ಧೆಗೆ ಬಿಜೆಪಿ ಶಾಸಕರಿಂದಲೇ ಚಾಲನೆ.. ಆಡಳಿತ ಪಕ್ಷದಿಂದ ಮತ್ತೆ ಕೋವಿಡ್ ರೂಲ್ಸ್ ಬ್ರೇಕ್