ಬೆಂಗಳೂರು: ಭ್ರಷ್ಟಾಚಾರದ ಕೂಪವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಇದೀಗ ನಗರದ ವಿವಿಧ ಸಬ್ ಬಿಡಿಎ ಕಚೇರಿಗಳ ಮೇಲೆ ದಾಳಿ (ACB Attack On BDA) ನಡೆಸಿದ್ದಾರೆ.
ಕಳೆದ ಶುಕ್ರವಾರ ಹಾಗೂ ಶನಿವಾರ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿ ದಾಖಲಾತಿ ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ ನಗರದ ನಾಲ್ಕು ಬಿಡಿಎ ಕಚೇರಿಗಳಲ್ಲಿ ಅಕ್ರಮ ಎಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲದೇ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದರಿಂದ ಬನಶಂಕರಿ, ಹೆಚ್ ಎಸ್ ಆರ್ ಲೇಔಟ್, ವಿಜಯನಗರ ಹಾಗೂ ಆರ್.ಟಿ.ನಗರ ಬಿಡಿಎ ಕಚೇರಿಗಳ ಮೇಲೆ ಏಕಕಾಲದಲ್ಲಿ ನಾಲ್ಕು ಪ್ರತ್ಯೇಕ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಸದ್ಯ ಕಚೇರಿ ಗೇಟ್ ಗಳನ್ನ ಬೀಗ ಹಾಕಿ ಒಳಗೆ ಅಧಿಕಾರಿಗಳ ಪರಿಶೀಲಿಸುತ್ತಿದ್ದು, ಈ ವೇಳೆ ಯಾರನ್ನೂ ಹೊರಬಿಡದೆ ಶೋಧ ನಡೆಸುತ್ತಿದ್ದಾರೆ. ಇತ್ತೀಚೆಗೆ ನಾಲ್ಕು ಕಚೇರಿಗಳಿಂದ ಎಸಿಬಿಗೆ ಸಾಲು ಸಾಲು ದೂರುಗಳು ಕೇಳಿ ಬಂದಿದ್ದವು. ದೂರುದಾರರ ಬಳಿಯೇ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿದ್ದ ಎಸಿಬಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದೆ. ದಾಳಿ ವೇಳೆ ಕಚೇರಿಯ ನೌಕರ ಹಾಗೂ ಸಿಬ್ಬಂದಿ ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ; ರಾಜಕಾಲುವೆ ಒತ್ತುವರಿ ತೆರವಿಗೆ ಪಣ