ಬೆಂಗಳೂರು: ತಮಿಳುನಾಡಿನ ನದಿ ಜೋಡಣಾ ಯೋಜನೆಗೆ ತಾತ್ಕಾಲಿಕ ತಡೆ ತರುವ ನಿಟ್ಟಿನಲ್ಲಿ ಕಾನೂನು ಹೋರಾಟ ಆರಂಭಿಸಬೇಕು, ಮೇಕೆದಾಟು ಯೋಜನೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಹಾಗು ಯೋಜನೆಗೆ ವೇಗವಾಗಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಭೋಜನ ವಿರಾಮದ ನಂತರ ತಮಿಳುನಾಡಿನಿಂದ ಅಕ್ರಮವಾಗಿ ಕಾವೇರಿ ನೀರು ಕಬಳಿಕೆ ಯೋಜನೆ ಕುರಿತು ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ಸಹಾಯ ಇದೆ, ಪ್ರಧಾನಿಗಳು ತಮಿಳುನಾಡಿಗೆ ಭೇಟಿ ಕೊಟ್ಟಾಗ ಅಡಿಗಲ್ಲು ಹಾಕಬೇಕಿತ್ತು ಆದರೆ ಅದು ರದ್ದಾಯಿತು. ಮತ್ತೆ ಬಂದು ಅಡಿಗಲ್ಲ ಹಾಕಲಿದ್ದಾರೆ ಎಂದು ಪತ್ರಿಕೆಯಲ್ಲಿ ಬಂದಿದ್ದು, ಪತ್ರಿಕಾರಂಗವನ್ನೂ ನಾವು ನಂಬಬೇಕಲ್ಲವೇ? ನೆಲ, ಜಲ, ಗಡಿ ವಿಷಯ ಬಂದಾಗ ಪಕ್ಷಬೇಧವಿಲ್ಲದೆ ನಾವೆಲ್ಲಾ ಹೋರಾಟ ಮಾಡಲಿದ್ದೇವೆ. ತಮಿಳುನಾಡಿನ ಧೋರಣೆ ಖಂಡನೀಯ ಎಂದರು.
ನಮ್ಮ ಹೆಚ್ಚುವರಿ ನೀರು ಬಳಸದ ವ್ಯವಸ್ಥೆಯನ್ನು ಅವರು ಮಾಡಿಬಿಡಲಿದ್ದಾರೆ, ತಮಿಳುನಾಡಿನ ದಕ್ಷಿಣದ ಜಿಲ್ಲೆಗಳನ್ನು ನೀರಾವರಿ ಮಾಡಲು ಹೊರಟಿದ್ದಾರೆ. ಇದರಿಂದ ನಾವು ನಮ್ಮ ಪಾಲಿನ ನೀರಿನ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತೇವೆ. 45 ಟಿಎಂಸಿ ನೀರನ್ನು ನಾವು ಬಳಕೆ ಮಾಡಬೇಕಿದೆ. ಆದರೆ, ಅದನ್ನು ನಾವು ಬಳಸಿಕೊಳ್ಳದ ವ್ಯವಸ್ಥೆಯನ್ನು ತಮಿಳುನಾಡಿನವರು ರೂಪಿಸಿಬಿಡುತ್ತಾರೆ ಎನ್ನುವ ಆತಂಕ ವ್ಯಕ್ತಪಡಿಸಿದರು.
ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ತೆಲಂಗಾಣ, ಆಂಧ್ರವನ್ನು ನಾವು ಕೇಳಬೇಕಿದ್ದು, ಇದನ್ನು ಬಜೆಟ್ ನಲ್ಲೇ ಹೇಳಿಕೊಂಡಿದ್ದೀರಿ. ಆದರೆ ಈಗ ತಮಿಳುನಾಡಿನವರು ನಮ್ಮನ್ನು ಕೇಳಿದ್ದಾರಾ? ಅಂತಾರಾಜ್ಯ ನದಿ ಇರುವಾಗ ನಮ್ಮನ್ನು ಕೇಳಲೇಬೇಕು. ಆದರೆ ಕೇಳಿಲ್ಲ ನಮ್ಮವರು ಏನು ಮಾಡುತ್ತಿದ್ದಾರೆ? ರಾಜ್ಯ ಚಕಾರವನ್ನೇ ಎತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರ ಇದೆ. ಒಂದು ಬೆಂಗಳೂರು ಮತ್ತೊಂದು ದೆಹಲಿಯ ಇಂಜಿನ್. ಈ ವಿಚಾರದಲ್ಲಿ ಎಷ್ಟು ಜೋರಾಗಿ ಹೋಗಬೇಕು. ಆದರೆ ಆಗುತ್ತಿರುವುದೇನು? ಒಂದೇ ಒಂದು ಸ್ಥಾನ ಇಲ್ಲದ ನೀವು ಎಐಡಿಎಂಕೆ ಜೊತೆ ರಾಜಕೀಯ ಮೈತ್ರಿಗೆ ಮುಂದಾಗಿದ್ದೀರಿ. ಇದೆಂತಾ ರಾಜಕೀಯ ಮೈತ್ರಿ, ನಿಮ್ಮ ಬೀಜ ಮೊಳಕೆಯೊಡೆದೇ ಇಲ್ಲ ಅಲ್ಲಿ. ಹಾಗಿರುವ ರಾಜ್ಯದ 120 ಕ್ಕೂ ಹೆಚ್ಚು ಶಾಸಕ 26 ಸಂಸದರ ಆಯ್ಕೆಯಾಗಿರುವ ರಾಜ್ಯದ ಕಡೆಗಣನೆ ಹೇಗೆ ಸಾಧ್ಯ? ಇದು ಗಂಭೀರ ವಿಷಯ. ಸರ್ಕಾರ ಬೇಗನೆ ಎಚ್ಚೆತ್ತುಕೊಳ್ಳಬೇಕು, ಪ್ರಧಾನಿ ಅವರನ್ನು ಹೇಳುವ ಹಕ್ಕು ನಿಮಗಿದೆ. ಇಷ್ಟು ಬಹುಮತ ಕೊಟ್ಟಿದ್ದೇವೆ, ನಮಗೆ ಅನ್ಯಾಯ ಮಾಡಬೇಡಿ ಎಂದು ಕೇಳಿ. ನಮ್ಮನ್ನೂ ನಿಮ್ಮ ಜೊತೆ ಕರೆದೊಯ್ದರೆ ನಾವು ನಿಮ್ಮ ಕೈ ಬಲಪಡಿಸಲಿದ್ದೇವೆ ಎಂದು ಭರವಸೆ ನೀಡಿದರು.
ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಒಂದು ಕ್ಷಣ ವ್ಯಯ ಮಾಡದೆ ಕಾರ್ಯ ಪ್ರವೃತ್ತರಾಗಿ. ಇಲ್ಲದೇ ಇದ್ದಲ್ಲಿ ಮೇಕೆದಾಟು ಯೋಜನೆಯನ್ನು ನಾವು ಕಳೆದುಕೊಳ್ಳುತ್ತೇವೆ. ಪ್ರಧಾನಿಗಳ ಬಳಿ ಸರ್ವ ಪಕ್ಷ ನಿಯೋಗ ಕರೆದೊಯ್ಯಬೇಕು, ಮೇಕೆದಾಟು ಯೋಜನೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಯೋಜನೆಗೆ ವೇಗವಾಗಿ ಅನುಮೋದನೆ ಪಡೆದುಕೊಳ್ಳಬೇಕು ಹಾಗು ಕೋರ್ಟ್ ಗೆ ಹೋಗಿ, ಕೇಂದ್ರದ ಬಳಿ ಹೋಗಿ ತಮಿಳುನಾಡಿನ ಯೋಜನೆಗೆ ತಾತ್ಕಾಲಿಕ ತಡೆ ತರಲು ಪ್ರಯತ್ನಿಸಿ ಎಂದು ಒತ್ತಾಯಿಸಿದರು.
ಭಾರತಿ ಶೆಟ್ಟಿಗೆ ಅಭಿನಂದನೆ
ಎಸ್.ಆರ್. ಪಾಟೀಲ್ ಮಾತನಾಡವ ವೇಳೆ ನೀವು ಆರಂಭಿಸಿದ್ದರೆ ಮೇಕೆದಾಟು ಯೋಜನೆ ನಾವು ಮುಂದುವರೆಸುತ್ತಿದ್ದೆವು ಎಂದು ಸಿ.ಪಿ ಯೋಗೀಶ್ವರ್ ಹೇಳಿದರು. ಆಗ ನೀವು ಮಾಡಿಲ್ಲ ಅಂದರೆ ನಾವುಚಮಾಡಬೇಕು ಎಂದು ಭಾರತಿ ಶೆಟ್ಟಿ ಹೇಳಿದರು ಇದನ್ನು ಪ್ರತಿಪಕ್ಷ ಸದಸ್ಯರು ಸ್ವಾಗತಿಸಿದರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಭಾರತಿ ಶೆಟ್ಟಿ ಅವರ ನಿಲುವಿಗೆ ಅಭಿನಂದಿಸಿದರು.
ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಮಾತನಾಡುತ್ತಾ, ರಾಜ್ಯ ಸರ್ಕಾರದಿಂದ ಅನುದಾನದ ವಿಚಾರದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುವ ಭೇದ ಭಾವ ಕಾಣುತ್ತಿದೆ ಎಂದರು. ಇದಕ್ಕೆ ಕಿಡಿಕಾರಿದ ಡಿಸಿಎಂ ಕಾರಜೋಳ, ಉತ್ತರ, ದಕ್ಷಿಣ ಎನ್ನುವ ಮಾತು ತರಬೇಡಿ, ಎರಡೂ ಕೂಡ ರಾಜ್ಯದ ಕಣ್ಣುಗಳಿದ್ದಂತೆ. ಯಾವ ಕಣ್ಣು ಮುಖ್ಯ ಎಂದು ಕೇಳಿದರೆ ಹೇಗೆ ಹೇಳಲು ಸಾಧ್ಯ ಎಂದರು. ಜಲಸಂಪನ್ಮೂಲ ಇಲಾಖೆ ನೋಡಿಕೊಳ್ಳಲು ಸಿಎಂ ನನಗೆ ಹೇಳಿದ್ದಾರೆ, ನಾನೇ ನೋಡಿಕೊಳ್ಳುತ್ತೇನೆ ಎಂದು ಸಚಿವರಿಲ್ಲ ಎನ್ನುವ ವಿವಾದಕ್ಕೂ ತೆರೆ ಎಳೆದರು. ಶ್ರೀಕಂಠೇಗೌಡರು, ತಿಪ್ಪೇಸ್ವಾಮಿ ಮಾತನಾಡಿದ್ದು ಕೇಳಿದೆ. ಆದರೆ ನೀವು ಮೈ ಪರಚಿದಿರಿ, ಅದಕ್ಕೆ ಎದ್ದು ನಿಂತೆ ಎಂದು ಡಿಸಿಎಂ ಹಾಸ್ಯ ಚಟಾಕಿ ಹಾರಿಸಿದರು.
ನಿದ್ದೆ ಮಾಡುತ್ತಿದ್ರಾ ಎಂದ ಮರಿತಿಬ್ಬೇಗೌಡರಿಗೆ ಟಾಂಗ್
ತಮಿಳುನಾಡು ಸರ್ಕಾರ ನದಿ ಜೋಡಣೆ ಮಾಡುವ ಯೋಜನೆಗೆ ಶಿಲಾನ್ಯಾಸ ಮಾಡುವವರೆಗೂ ನಿದ್ದೆ ಮಾಡುತ್ತಿದ್ದಿರಿ. ಅದಕ್ಕೆ ನಾವು ಎಬ್ಬಿಸುತ್ತಿದ್ದೇವೆ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸರ್ಕಾರಕ್ಕೆ ಟಾಂಗ್ ನೀಡಿದರು. ಇದಕ್ಕೆ ಕೆರಳಿದ ಡಿಸಿಎಂ ಗೋವಿಂದ ಕಾರಜೋಳ, ಚರ್ಚೆ ಮಾಡಿ ಉತ್ತರ ಕೊಡಲು ಸಿದ್ಧರಿದ್ದೇವೆ. ಆದರೆ ರಾಜಕಾರಣ ಬೆರೆಸಿದರೆ ನಮಗೂ ರಾಜಕಾರಣ ಮಾಡಲು ಬರಲಿದೆ ಈ ಹಿಂದೆ ನೀವು 6.5 ವರ್ಷ ನಿದ್ದೆ ಮಾಡುತ್ತಿದ್ದಿರಾ ಎಂದು ತಿರುಗೇಟು ನೀಡಿದರು.
ಪುರಾವೆ ಇಡಿ, ಪತ್ರಿಕೆ ನೋಡಬೇಡಿ
ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ ಎನ್ನುವ ನಾರಾಯಣಸ್ವಾಮಿ ಹೇಳಿಕೆಗೆ ಡಿಸಿಎಂ ಕಾರಜೋಳ ಆಕ್ಷೇಪ ವ್ಯಕ್ತಪಡಿಸಿದರು. ಪತ್ರಿಕೆಗಳಲ್ಲಿ ಬಂದ ಮಾಹಿತಿ ಕೊಡಬೇಡಿ, ಅಧಿಕೃತ ಮಾಹಿತಿ ಇದ್ದರೆ ಕೊಡಿ ಎಂದರು. ಇದರಿಂದ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಬಳಿಕೆ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ನಿಯಂತ್ರಿಸಿ ಸುಗಮ ಚರ್ಚೆಗೆ ಅವಕಾಶ ಕಲ್ಪಿಸಿದರು.
ನಂತರ ಮಾತು ಮುಂದುವರೆಸಿದ ನಾರಾಯಣಸ್ವಾಮಿ, ತಮಿಳುನಾಡಿನಲ್ಲಿ ಚುನಾವಣೆ ಇದೆ. ಆಡಳಿತ ಪಕ್ಷಕ್ಕೆ ಎನ್.ಡಿ.ಎ ಸರ್ಕಾರದ ಬೆಂಬಲ ಇದೆ, ರಾಜಕಾರಣಕ್ಕೆ ಆ ರಾಜ್ಯಕ್ಕೆ ಸಹಕಾರ ನೀಡಿದರೆ ರಾಜ್ಯದ ಕಥೆ ಏನು? ಎರಡೂ ಕಡೆ ಒಂದೇ ಸರ್ಕಾರ ಇದ್ದರೆ ಸುವರ್ಣ ಯುಗ ಬರಲಿದೆ ಎಂದಿರಿ. ಈಗ ಇದೆಯಲ್ಲ, ನಿರ್ಮಿಸಿ ಎಂದು ಕಿಚಾಯಿಸಿದರು.
ರಾಜ್ಯದ ಪರ ದನಿ ಎತ್ತಲಿ ನಿಮ್ಮದನಿ ಅಡಗಿಹೋಗಿದೆ, ಸರ್ವ ಪಕ್ಷ ನಿಯೋಗ ಕರೆದೊಯ್ಯೋದು ರಾಜಕೀಯ ಮಾಡುವುದಕ್ಕಲ್ಲ. ರಾಜ್ಯದ ಹೊತಾಸಕ್ತಿಗಾಗಿ ನಿಯೋಗ ಹೋಗೋಣ. ತಮಿಳುನಾಡು ಎಲ್ಲ ಕಾನೂನು ಧಿಕ್ಕರಿಸಿ ಯೋಜನೆ ಮಾಡಲುಬ ಹೊರಟಿದೆ, ನೋಡಿಕೊಂಡು ಕೂರಬೇಕಾ ಎಂದು ಪ್ರಶ್ನಿಸಿದರು.
ಮಲತಾಯಿ ಧೋರಣೆ
ನಂತರ ಜೆಡಿಎಸ್ ನ ಮರಿತಿಬ್ಬೇಗೌಡ ಮಾತನಾಡಿ, ತಮಿಳುನಾಡಿನಲ್ಲಿ ಚುನಾವಣೆ ಇದೆ ಎಂದು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದ ಜೊತೆ ರಾಜ್ಯ ಮಾತುಕತೆ ನಡೆಸದೇ ಇರುವುದು ನಮಗೆ ಅನುಮಾನ ಮೂಡುವಂತೆ ಮಾಡಿದೆ, ಕೂಡಲೇ ಕೇಂದ್ರಕ್ಕೆ ಮನವಿ ಮಾಡಿ ಯೋಜನೆಗೆ ತಾತ್ಕಾಲಿಕ ತಡೆಗೆ ಪ್ರಯತ್ನ ಮಾಡಬೇಕು ಎಂದರು.
ಪ್ರಾದೇಶಿಕ ಪಕ್ಷಗಳ ಸರ್ಕಾರ ಇರುವ ಕಡೆ ಕೇಂದ್ರದಿಂದ ಸಾಕಷ್ಟು ನೆರವು ಪಡೆದುಕೊಳ್ಳುತ್ತಿವೆ, ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಿವೆ ಆದರೆ ರಾಷ್ಟ್ರೀಯ ಪಕ್ಷ ಬೆಂಬಲಿಸದ ನಮಗೆ ಇಲ್ಲಿ ಕೇಂದ್ರದ ನೆರವು ಸರಿಯಾಗಿ ಸಿಗುತ್ತಿಲ್ಲ, ಎರಡೂ ಕಡೆ ಒಂದೇ ಸರ್ಕಾರ ಇದ್ದ ಉದಾಹರಣೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಒಂದೇ ಸರ್ಕಾರ ಇದ್ದರೂ ನಮಗೆ ಸೌಲಭ್ಯ ಸರಿಯಾಗಿ ಸಿಕ್ಕಿಲ್ಲ. ಈಗಲಾದರೂ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕು, ತಮಿಳುನಾಡಿನ ಯೋಜನೆಗೆ ಕೇಂದ್ರದಿಂದ ತಾತ್ಕಾಲಿಕ ತಡೆ ತರಬೇಕು ಎಂದು ಒತ್ತಾಯಿಸಿದರು.