ಬೆಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವನನ್ನು ಕ್ಷುಲ್ಲಕ ವಿಚಾರಕ್ಕೆ ಚಾಕುವಿನಿಂದ ಚುಚ್ಚಿ ಕೊಂದ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
20 ವರ್ಷದ ಅಸ್ಕರ್ ಕೊಲೆಯಾದ ಯುವಕ. ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ತಬ್ರೇಜ್ ಹಾಗೂ ಸಮೀರ್ ಎಂಬುವವರ ಗ್ಯಾಂಗ್ ಈತನಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಅಸ್ಕರ್ನನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಕೊಲೆಯಾದ ಅಸ್ಕರ್ ಹಾಗೂ ಆರೋಪಿ ತಬ್ರೇಜ್ ನಡುವೆ ಮೂರು ದಿನದ ಹಿಂದೆ ಗಲಾಟೆ ನಡೆದಿದ್ದು, ಈ ವೇಳೆ ತಬ್ರೇಜ್ ಕೊಲೆಯಾದ ಅಸ್ಕರ್ಗೆ ಕಪಾಳಕ್ಕೆ ಹೊಡೆದಿದ್ದನಂತೆ. ಇದೇ ಕಾರಣಕ್ಕೆ ತಬ್ರೇಜ್ನನ್ನು ಕೊಲೆ ಮಾಡುವುದಾಗಿ ಅಸ್ಕರ್ ಕೆಲವರ ಬಳಿ ಹೇಳಿಕೊಂಡಿದ್ದಾನೆ. ಇದೇ ಕಾರಣಕ್ಕೆ ಭೀತಿಗೊಂಡ ತಬ್ರೇಜ್ ತನ್ನ ಗ್ಯಾಂಗ್ನೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.