ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಕೂಗಿದ್ಧ ಅಮೂಲ್ಯ ಲಿಯೋನಳನ್ನು ವಶಕ್ಕೆ ಪಡೆದಿರುವ ಉಪ್ಪಾರಪೇಟೆ ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ಅವರು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. ದೇಶದ್ರೋಹ ಪ್ರಕರಣದಡಿ ಬಂಧಿಸಿ ಇಂದು ರಾತ್ರಿಯೇ ಕೋರಮಂಗಲದ ಎನ್ಜಿವಿ ಬಡಾವಣೆಯಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೊಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಮೂಲ್ಯ ಲಿಯೋನನ್ ವಿರುದ್ದ 124(A) ದೇಶದ್ರೋಹ ಮತ್ತು 153(A) ರಡಿ ಕೋಮು ಸಂಘರ್ಷ, ಶಾಂತಿಭಂಗ ತಂದ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಜ್ಞಾತ ಸ್ಥಳದಲ್ಲಿರುವ ಅಮೂಲ್ಯಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಇಂದು ರಾತ್ರಿಯೇ ಬೆಂಗಳೂರಿನ ಎನ್ಜಿವಿ ಬಡಾವಣೆಯಲ್ಲಿರುವ ಐದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಫ್ರೀಡಂಪಾರ್ಕ್ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ಪಾಕಿಸ್ತಾನ ಪರ ಜೈಕಾರ ಕೂಗುತ್ತಿದ್ದಂತೆ ಕೂಡಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಾವು ಅಮೂಲ್ಯಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿರಲಿಲ್ಲ. ಆಕೆ ಹೇಗೆ ವೇದಿಕೆ ಹತ್ತಿದ್ದಳು ಎಂಬ ಮಾಹಿತಿ ತಿಳಿಯುತ್ತಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಪ್ರತಿಕ್ರಿಯಿಸಿದ್ದಾರೆ. ಆಕಸ್ಮಿಕವಾಗಿ ಪಾಕಿಸ್ತಾನ ಪರ ಘೋಷಣೆ ಕೂಗಿದಳಾ ಅಥವಾ ಮೊದಲೇ ಈ ಬಗ್ಗೆ ಸಂಚು ರೂಪಿಸಿದ್ದರಾ? ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಈ ನಡುವೆ ಕಾರ್ಯಕ್ರಮದ ಆಯೋಜಕ ಇಮ್ರಾನ್ ಪಾಷಾ ಮಾತನಾಡಿ, ನಾವ್ಯಾರೂ ಅಮೂಲ್ಯಳನ್ನು ಆಹ್ವಾನಿಸಿಲ್ಲ. ಹಿಂದೂ-ಮುಸ್ಲಿಂ ನಡುವೆ ಬಿರುಕು ಮೂಡಿಸಲು ಈ ಹೇಳಿಕೆ ನೀಡಿದ್ದಾಳೆ. ಅಮೂಲ್ಯಳ ಭಾಷಣದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.