ಬೆಂಗಳೂರು: ವಿವಾದ ಕೇಂದ್ರ ಬಿಂದುವಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಪೊಲೀಸರ ಸರ್ಪಗಾವಲುನೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಬೆಂಗಳೂರು ನಗರ ಉತ್ತರ ವಿಭಾಗ ಉಪವಿಭಾಗಧಿಕಾರಿ ಶಿವಣ್ಣ ರಾಷ್ಟ್ರಧ್ವಜಾರೋಹಣ ನೇರವೇರಿಸಿದರು. ಸಂಸದ ಪಿ.ಸಿ.ಮೋಹನ್, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಂಭ್ರಮಾಚರಣೆಯಲ್ಲಿ ಉಪಸ್ಥಿತರಿದ್ದರು.
ಪೊಲೀಸ್ ಕಟ್ಟೆಚ್ಚರದೊಂದಿಗೆ ಸ್ವಾತಂತ್ರ್ಯ ದಿನಾಚರಣೆ: ಚಾಮರಾಜಪೇಟೆ ಈದ್ಗಾ ಮೈದಾನದ ವಿಷಯವಾಗಿ ಏರ್ಪಟ್ಟಿದ್ದ ಜಟಾಪಟಿಗೆ ಅಂತ್ಯ ಹಾಡಿ ರಾಜ್ಯ ಸರ್ಕಾರವೇ ಸ್ವಾತಂತ್ರ್ಯ ದಿನಾಚರಣೆ ಮಾಡುವುದಾಗಿ ನಿರ್ಧಾರ ಕೈಗೊಂಡಿತ್ತು. 75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿತ್ತು. ನಿನ್ನೆ ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿಪಿ ಪ್ರವೀಣ್ ಸೂದ್ ಸ್ಥಳಕ್ಕೆ ಆಗಮಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಪರಿಶೀಲಿಸಿದ್ದರು.
ಇದರಂತೆ ಮೈದಾನದ ಸುತ್ತ ಪೊಲೀಸರ ಸರ್ಪಗಾವಲಿತ್ತು. ಅಕ್ಕಪಕ್ಕದ ಕಟ್ಟಡಗಳ ಮೇಲೆಯೂ ಪೊಲೀಸ್ ಸಿಬ್ಬಂದಿ ಗಸ್ತು ಕಾದು ಅಹಿತರ ಘಟನೆ ಸಾಕ್ಷಿಯಾಗದಂತೆ ನೋಡಿಕೊಂಡರು. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಡಿಸಿಪಿ ಸೇರಿದಂತೆ ಸೇರಿ ಸುಮಾರು 600ಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆಯಾಗಿದ್ದರು. ಕೇಂದ್ರೀಯ ಅರಸೇನಾ ಪಡೆ ಹಾಗೂ ಸ್ಥಳೀಯ ಆರ್ಎಎಫ್, ಸಿಎಆರ್ ಸೇರಿದಂತೆ ಹೆಚ್ಚಿನ ಪೊಲೀಸ್ ಪಡೆ ಭದ್ರತೆಗೆ ನಿಯೋಜನೆಯಾಗಿತ್ತು.
ಶಾಸಕ ಜಮೀರ್ ಮಾತನಾಡಿ, ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿರೋದು ನನಗೆ ಖುಷಿ ತಂದಿದೆ. ನಾನು ಅಂದುಕೊಂಡಂತೆ ಆಗಿದೆ. ಎರಡು ತಿಂಗಳ ಹಿಂದೆಯೇ ಸ್ವಾತಂತ್ರ್ಯ ಆಚರಣೆ ಬಗ್ಗೆ ಹೇಳಿದ್ದೆ. ಇನ್ಮುಂದೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಧಾರ್ಮಿಕ ಹಬ್ಬದ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ. ನಾನು ನಿರ್ಧಾರ ಮಾಡಕ್ಕಾಗಲ್ಲ. ಇದು ಈಗ ಸರ್ಕಾರದ ಆಸ್ತಿ. ಸಂಭ್ರಮದ ದಿನ ಹೆಚ್ಚು ಮಾತಾಡೋದು ಬೇಡ ಎಂದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಚಾಮರಾಜಪೇಟೆಯಲ್ಲಿ ಧ್ವಜಾರೋಹಣ ಮಾಡಲಾಗಿದೆ. ಶಾಂತಿಯುತವಾಗಿ ಕಾರ್ಯಕ್ರಮ ನಡೆದಿರುವುದು ಸಂತೋಷ ತಂದಿದೆ ಎಂದು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ನಾಗರೀಕ ಹಿತರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಶ್ರೀರಾಮೇಗೌಡ ಮಾತನಾಡಿ ಇವತ್ತಿನ ಇತಿಹಾಸ ಪುಟಗಳಲ್ಲಿ ಬರೆಯುವಂತಿದೆ. ಸರ್ಕಾರದ ವತಿಯಿಂದಲೇ ಕಾರ್ಯಕ್ರಮ ನಡೆರುವುದು ಸಂತೋಷವಾಗಿದೆ ಎಂದರು.
(ಇದನ್ನೂ ಓದಿ: ಕೆಂಪುಕೋಟೆಯಲ್ಲಿ ಹಾರಿದ ಧ್ವಜ.. ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ.. ಮೋದಿ ಬಣ್ಣನೆ)