ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ಈ ಬಾರಿ ಬಿಬಿಎಂಪಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. 71% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಪಾಲಿಕೆ ಶಾಲೆಗಳ ಹಿರಿಮೆಯನ್ನ ಹೆಚ್ಚಿಸಿದ್ದಾರೆ. ಕಳೆದ ವರ್ಷದ (99.9 % ರಷ್ಟು) ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ತೇರ್ಗಡೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ, ಕಳೆದ ವರ್ಷ ಕೋವಿಡ್ನಿಂದಾಗಿ ಪರೀಕ್ಷೆ ನಡೆಸದೆ ಬಹುತೇಕ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು.
ಈ ಹಿಂದೆ 2019-20 ರಲ್ಲಿ ಶೇ. 50.16, 2018-19 ರಲ್ಲಿ ಶೇ. 52.24, 2017-18ರಲ್ಲಿ ಶೇ. 51.92 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಮೂರು ವರ್ಷದ ಫಲಿತಾಂಶಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಸುಮಾರು 20% ರಷ್ಟು ಹೆಚ್ಚಿನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಪಾಲಿಕೆ ಶಾಲೆಗಳು ಉತ್ತಮ ಸಾಧನೆ ಮಾಡುತ್ತಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಒಟ್ಟು 33 ಪ್ರೌಢಶಾಲೆಗಳಿದ್ದು, ಈ ಬಾರಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 1,991 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 1,419 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 71% ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 742 ಗಂಡು ಮಕ್ಕಳಲ್ಲಿ 41 ಹಾಗೂ 1,249 ಹೆಣ್ಣು ಮಕ್ಕಳಲ್ಲಿ 103 ವಿದ್ಯಾರ್ಥಿಗಳು ಸೇರಿದಂತೆ 144 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬಿಬಿಎಂಪಿ ಶ್ರೀರಾಮಪುರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಉಜ್ವಲ.ಎಂ.ಸಿ 625 ಕ್ಕೆ 616 ಅಂಕಗಳನ್ನು ಪಡೆದು ಪಾಲಿಕೆ ಪ್ರೌಢಶಾಲೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ.
ಎರಡು ಶಾಲೆಗಳಲ್ಲಿ " ಶೂನ್ಯ " ಸಾಧನೆ: ಬಿಬಿಎಂಪಿಯ ಶಾಂತಿನಗರ ಪ್ರೌಢಶಾಲೆಯು ಶೇ. 100 ರಷ್ಟು ಫಲಿತಾಂಶ ನೀಡಿ ಮೊದಲ ಸ್ಥಾನ ಪಡೆದರೆ, ಭೈರವೇಶ್ವರ ನಗರ ಪ್ರೌಢಶಾಲೆಯು ಶೇ. 91.52 ರಷ್ಟು ಫಲಿತಾಂಶ ನೀಡಿ ಎರಡನೇ ಸ್ಥಾನ, ಹೇರೋಹಳ್ಳಿ ಪ್ರೌಢಶಾಲೆಯು ಶೇ. 90.12 ರಷ್ಟು ಫಲಿತಾಂಶ ನೀಡಿ ಮೂರನೇ ಸ್ಥಾನ ಪಡೆದಿದೆ. ಹಾಗೆಯೇ, ಪಾಲಿಕೆಯ ಸಿಜಿಹೆಚ್ ಎಸ್ ಮರ್ಫಿಟೌನ್ ಮತ್ತು ಸಿಜಿಹೆಚ್ ಎಸ್ ಕೆ.ಜಿ ನಗರ ಪ್ರೌಢಶಾಲೆಗಳು " ಶೂನ್ಯ " ಫಲಿತಾಂಶ ದಾಖಲಿಸಿವೆ. ಈ ಎರಡು ಶಾಲೆಯಿಂದ ಪರೀಕ್ಷೆ ಬರೆದ ಯಾವ ವಿದ್ಯಾರ್ಥಿಯೂ ಪಾಸಾಗಿಲ್ಲ.
ಮುಖ್ಯ ಆಯುಕ್ತರಿಂದ ಅಭಿನಂದನೆ: ಬಿಬಿಎಂಪಿಯ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಭಿನಂದಿಸಿದ್ದಾರೆ. ಜೊತೆಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪಾಲಿಕೆ ಶಾಲೆಗಳಿಗೆ ಹೆಸರು ತಂದ 144 ವಿದ್ಯಾರ್ಥಿಗಳಿಗೆ ತಲಾ 25,000 ರೂ. ಗಳ ಪ್ರೋತ್ಸಾಹಧನ ನೀಡಲಾಗುವುದೆಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್‌ಸಿ ಫಲಿತಾಂಶ: ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಆ್ಯಂಬುಲೆನ್ಸ್ ಚಾಲಕನ ಮಗಳು