ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 53 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಕೊರೊನಾ ಉಡೀಸ್ ಮಾಡಿದ್ದು, ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ಜೊತೆಗೆ ಮತ್ತೊಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈವರೆಗೆ 405 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಹಸಿರು ವಲಯದಲ್ಲಿದ್ದ ಶಿವಮೊಗ್ಗಕ್ಕೆ ಕೊರೊನಾ ಕಾಲಿಟ್ಟಿದೆ. ಒಂದೇ ದಿನದಲ್ಲಿ 8 ಮಂದಿಗೆ ಸೋಂಕು ತಗುಲಿದೆ. ಈ ಸೋಂಕಿತರೆಲ್ಲರೂ ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ.
ಬೆಂಗಳೂರಿನಲ್ಲಿಯೂ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಮೂವರಿಗೆ ಸೋಂಕು ದೃಢಪಟ್ಟಿದೆ. ಉತ್ತರಕನ್ನಡದಲ್ಲಿ 7, ಚಿಕ್ಕಬಳ್ಳಾಪುರದಲ್ಲಿ 1, ಕಲಬುರಗಿಯಲ್ಲಿ 3, ಬಾಗಲಕೋಟೆಯಲ್ಲಿ 8, ಬೆಳಗಾವಿಯಲ್ಲಿ 22, ದಾವಣಗೆರೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಬೆಂಗಳೂರಿನ 56 ವರ್ಷದ ವೃದ್ಧ ಮಹಿಳೆ (ರೋಗಿ ಸಂಖ್ಯೆ 846) ಉಸಿರಾಟದ ತೊಂದರೆಯಿಂದ ಮೇ 4ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 6ರಂದು ಮತ್ತೊಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ದಿನ ಆಕೆಯ ಗಂಟಲು ದ್ರವವನ್ನು ಸೋಂಕು ಪತ್ತೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಆಕೆ ಮೇ 7ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆಕೆಯಲ್ಲೂ ಕೊರೊನಾ ಸೋಂಕಿರುವುದು ಮೇ 9ರಂದು ಬಂದ ಫಲಿತಾಂಶದಲ್ಲಿ ದೃಢಪಟ್ಟಿದೆ.
ಅಂತಾರಾಜ್ಯ ಓಡಾಟವೇ ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿನ ಮೂಲ..!
ಬೆಳಗಾವಿ, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಕಂಡು ಬಂದ ಬಹುಪಾಲು ಅಷ್ಟೂ ಕೊರೊನಾ ಸೋಂಕಿತರಿಗೆ ರಾಜಸ್ತಾನದ ಅಜ್ಮೀರ್ ಪ್ರವಾಸ ಹಾಗೂ ಪ್ರವಾಸ ಕೈಗೊಂಡಿದ್ದವರ ಸಂಪರ್ಕದ ಹಿನ್ನೆಲೆಯಿದೆ. ಶಿವಮೊಗ್ಗದ 8 ಸೋಂಕಿತರೂ ಗುಜರಾತಿನ ಅಹಮದಾಬಾದ್ಗೆ ಪ್ರಯಾಣಿಸಿದ್ದರು. ಕಲಬುರಗಿಯ ಓರ್ವ ಸೋಂಕಿತ ಮಹಾರಾಷ್ಟ್ರದಿಂದ ಬಂದ ಹಿನ್ನೆಲೆಯಿದೆ. ಇದರಿಂದ ಅಂತಾರಾಜ್ಯ ಓಡಾಡವೇ ಸೋಂಕಿನ ಮೂಲ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರ ಲಾಕ್ಡೌನ್ ಸಡಿಲಿಕೆ ತೀರ್ಮಾನವನ್ನು ಪುನರ್ಪರಿಶೀಲನೆ ಮಾಡುತ್ತಾ.? ಎಂಬ ಅನುಮಾನಗಳು ಕಾಡುತ್ತಿವೆ