ಬೆಂಗಳೂರು: ಪ್ರವಾಹ ಪೀಡಿತ 13 ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಪುನರ್ ಸ್ಥಾಪನೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಕಂದಾಯ ಇಲಾಖೆ 500 ಕೋಟಿ ರೂ. ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಮೂಲ ಸೌಕರ್ಯಗಳಾದ ರಸ್ತೆ, ಸೇತುವೆ, ಕಟ್ಟಡಗಳ ದುರಸ್ತಿ ಕಾರ್ಯಕ್ಕಾಗಿ ಅನುದಾನ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.
ಅದರಂತೆ ತುರ್ತಾಗಿ ದುರಸ್ತಿ ಕಾಮಗಾರಿಗಳಿಗಾಗಿ ಬೆಳಗಾವಿಗೆ 200 ಕೋಟಿ ರೂ, ಬಾಗಲಕೋಟೆಗೆ 50 ಕೋಟಿ, ಚಿಕ್ಕಮಗಳೂರಿಗೆ 20 ಕೋಟಿ, ಶಿವಮೊಗ್ಗ 10 ಕೋಟಿ, ಉ.ಕನ್ನಡಕ್ಕೆ 25 ಕೋಟಿ, ದ.ಕ 35 ಕೋಟಿ, ಧಾರವಾಡ 40 ಕೋಟಿ, ಗದಗ 10 ಕೋಟಿ, ಹಾವೇರಿ 35 ಕೋಟಿ, ಹಾಸನ 15 ಕೋಟಿ, ಕೊಡಗು 10 ಕೋಟಿ, ಮೈಸೂರು 30 ಕೋಟಿ ಹಾಗೂ ಉಡುಪಿಗೆ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಈ ಮೊತ್ತದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಸರ್ಕಾರಿ ಆಸ್ಪತ್ರೆ, ಶಾಲಾ ಕಾಲೇಜು, ಅಂಗನವಾಡಿ ಕಟ್ಟಡಗಳ ಪುನರ್ ಸ್ಥಾಪನೆ ಹಾಗೂ ದುರಸ್ತಿ ಕಾರ್ಯವನ್ನು ಮೊದಲ ಆದ್ಯತೆಯಲ್ಲಿ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಈ ಅನುದಾನದಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳದಂತೆ ತಿಳಿಸಲಾಗಿದೆ. ಇನ್ನು ಸಂಪೂರ್ಣ ಹಾನಿಗೊಳಗಾದ ಆಸ್ತಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿಸಿ ಮರು ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.