ಬೆಂಗಳೂರು : ಕೋವಿಡ್-19 ಸಮರ್ಪಕ ನಿರ್ವಹಣೆಗೆ ಬಿಬಿಎಂಪಿಯಲ್ಲಿ ಸಿದ್ಧವಾಗಿರುವ ವಾರ್ ರೂಂಗಳಿಗೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಡಿಸಿಎಂ, ಕರ್ಫ್ಯೂ ಇರುವ ಹಿನ್ನಲೆ ವೈದ್ಯರೂ ಸಹ ರಸ್ತೆಗಿಳಿಯಲು ಹೆದರುತ್ತಿದ್ದಾರೆ. ಆದ್ರೆ ಐಡಿ ತೋರಿಸಿ ತಮ್ಮ ಸೇವೆಯಲ್ಲಿ ವೈದ್ಯರು ನಿರತರಾಗಬಹುದು. ಜೊತೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ವೈದ್ಯರು ಮನೆಯಲ್ಲಿದ್ದೇ ರೋಗಿಗಳಿಗೆ ಟೆಲಿಕೌನ್ಸಿಲಿಂಗ್ ಮಾಡೋದಕ್ಕೆ ಸಿದ್ಧವಾಗಿದ್ದಾರೆ. ಕೊರೊನಾ ಅಥವಾ ಯಾವುದೇ ಖಾಯಿಲೆಗೆ ಸೂಕ್ತ ಕೌನ್ಸಿಲಿಂಗ್ ಪಡೆಯಬಹುದು ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಕೊರೊನಾ ಸೋಂಕಿತರು, ಶಂಕಿತರ ಮಾಹಿತಿ ವಾರ್ ರೂಂನಲ್ಲಿ ಇದೆ. ವಾರ್ ರೂಂ ನಲ್ಲಿ 21 ಸಾವಿರಕ್ಕೂ ಹೆಚ್ಚು ಜನ ಕ್ವಾರಂಟೈನ್ನಲ್ಲಿದಾರೆ. ಕೊರೊನಾ ಶಂಕಿತರು, ಸೋಂಕಿತರ ಮಾಹಿತಿ, ಎಲ್ಲಾ ವರದಿಗಳು ವಾರ್ ರೂಂ ನಲ್ಲಿ ಸಂಗ್ರಹಿಸಲಾಗ್ತಿದೆ. ಆಂಬುಲೆನ್ಸ್ ನಿಂದ ಹಿಡಿದು ಪ್ರತಿಯೊಂದರ ಗ್ರೌಂಡ್ ಲೆವೆಲ್ ರಿಪೋರ್ಟ್ ಸಿದ್ಧಪಡಿಸಲಾಗ್ತಿದೆ. ನೂರಾರು ಜನರ ತಂತ್ರಜ್ಞಾನ ಬಳಸಿ ಸಮರ್ಥವಾದ ವ್ಯವಸ್ಥೆ ವಾರ್ ರೂಂ ನಲ್ಲಿ ರಚನೆ ಆಗಿದೆ. ಸೇವೆ, ಸಹಾಯ ಮಾಡಲು ಕೂಡಾ ಅವಕಾಶ ಇದೆ. ಹಣಕಾಸಿನ ಸಮಸ್ಯೆ ಇರುವವರಿಗೆ ಹಲವಾರು ಸಂಘ ಸಂಸ್ಥೆಗಳು, ಐಟಿ ಬಿಟಿ ಸಂಸ್ಥೆಗಳು, ಸಹಾಯ ಮಾಡಲಿವೆ. ಸರ್ಕಾರವೂ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದರು.
ಕ್ವಾರಂಟೈನ್ ಮಾಡಿರುವ ವ್ಯಕ್ತಿಗಳು ಎಲ್ಲಿ ತಿರುಗಾಡಿದ್ರೂ ಅವರ ಮಾಹಿತಿ ಮೊಬೈಲ್ ಮೂಲಕ ಸಿಗಲಿದೆ. ಮನೆಯಲ್ಲಿದ್ದೇ ಪ್ರತಿಯೊಂದು ಸೇವೆ ಸಲ್ಲಿಸಲು ಎನ್ಜಿಒ ಗಳ ಸಹಾಯವನ್ನೂ ಪಡೆಯಲಾಗುತ್ತಿದೆ ಎಂದರು.
ಇನ್ನು ಕೊರೊನಾ ಶಂಕಿತರೊಬ್ಬರು ರಾಜ್ಯದಲ್ಲಿ ಸಾವನ್ನಪ್ಪಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಇನ್ನು ಯಾವ ಕಾರಣಕ್ಕೆ ಸಾವಾಗಿದೆ ಅನ್ನೋದು ಗೊತ್ತಾಗಿಲ್ಲ, ಲ್ಯಾಬ್ ಟೆಸ್ಟ್ ಆಗಬೇಕಿದೆ ಎಂದರು.