ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶ ಮತ್ತು ಮಾಸ್ಕ್ ಮಾರಾಟಗಾರರಿಂದ ಸುಮಾರು 2 ಕೋಟಿ ಲಂಚ ಪಡೆದ ಆರೋಪ ಪ್ರಕರಣ ಸಂಬಂಧ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳ ವಿರುದ್ಧ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯಲ್ಲಿ ಮೂರು ಎಫ್ಐಆರ್ ದಾಖಲಾಗಿವೆ.
ಅಮಾನತುಗೊಂಡಿರುವ ಸಿಸಿಬಿ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ಗಳಾದ ನಿರಂಜನ್ ಹಾಗೂ ಅಜಯ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಏ.30 ರಂದು ಆನಂದಪುರದ ರಮೇಶ್ ಎಂಬಾತ ಕಂಪನಿಯೊಂದರ ಸಿಗರೇಟ್ ಅನ್ನು ಅನಧಿಕೃತವಾಗಿ ದಾಸ್ತಾನುದಾರ ಟಿಸಿಎಸ್ ಮತ್ತು ದೊಡ್ಡನೆಕ್ಕುಂದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ವೇಳೆ ದಾಳಿ ನಡೆಸಿ 12 ಲಕ್ಷ ಬೆಲೆಬಾಳುವ 12 ಬಾಕ್ಸ್ಗಳಲ್ಲಿದ್ದ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದರು. ನಿಷೇಧದ ನಡುವೆಯೂ ಸಿಗರೇಟ್ ಮಾರಾಟ ಮಾಡಿದ್ದರಿಂದ ಅವರ ವಿರುದ್ಧ ದೂರು ದಾಖಲಾಗಿತ್ತು.
ಸಿಸಿಬಿ ಎಸಿಪಿ ಪ್ರಭು ಶಂಕರ್ ಈ ಕುರಿತು ಪ್ರಕರಣ ದಾಖಲಿಸಬಾರದೆಂದು ಕಂಪನಿ ಮಾಲೀಕರು ಲಂಚ ಕೊಡಲು ಮುಂದಾಗಿದ್ದರು ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಎಸ್‌ಪಿ ಪ್ರಭು ಶಂಕರ್ ಅವರು 65 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ನಕಲಿ ಮಾಸ್ಕ್ಗಳ ಮಾರಾಟದ ಅಡ್ಡೆ ಮೇಲೆ ದಾಳಿ ನಡೆಸಿ, ಆರೋಪಿಗಳಿಂದ ಲಂಚ ಪಡೆದಿದ್ದರು ಎನ್ನುವ ಆರೋಪ ಸೇರಿದಂತೆ ಎಸಿಪಿ ಹಾಗೂ ಇಬ್ಬರು ಇನ್ಸ್ಪೆಕ್ಟರ್ಗಳ ವಿರುದ್ಧ ಎಫ್ಐಆರ್ ದಾಖಲಾಗಿವೆ.