ಬೆಂಗಳೂರು: ಸಾಲಗಾರನಿಗೆ ಹಿಂಸಾಚಾರ, ಬೆದರಿಸುವವರಿಗೆ ಜೈಲುಶಿಕ್ಷೆ ಮತ್ತು ದಂಡ ಹೆಚ್ಚಿಸುವ ಕರ್ನಾಟಕ ಲೇವಾ-ದೇವಿದಾರರ (ತಿದ್ದುಪಡಿ) ವಿಧೇಯಕ ಸೇರಿದಂತೆ ಮೂರು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ 2021, ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕ 2021 ಮತ್ತು ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ವಿಧೇಯಕ 2021 ಮಂಡನೆಯಾಗಿವೆ.
ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ 2021ನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಡಿಸಿದರು. ಈ ವಿಧೇಯಕದಲ್ಲಿ ಕಾನೂನು ಪ್ರಕಾರ ಸಾಲಗಾರನಿಂದ ಸಾಲ ವಸೂಲಿ ಮಾಡಬೇಕು. ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಮಾಡುವಂತಿಲ್ಲ. ಒಂದು ವೇಳೆ ಈ ಕೃತ್ಯವನ್ನು ಎಸಗಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲುಶಿಕ್ಷೆ ಅಥವಾ ಐದು ಸಾವಿರ ರೂ.ವರೆಗೆ ವಿಧಿಸಬಹುದಾದ ದಂಡದ ಬದಲಿಗೆ ಒಂದು ವರ್ಷದವರೆಗೆ ಶಿಕ್ಷೆ ಅಥವಾ 50 ಸಾವಿರ ರೂ.ವರೆಗೆ ದಂಡ ವಿಧಿಸುವುದಕ್ಕೆ ತಿದ್ದುಪಡಿ ಮಾಡಲಾಗಿದೆ.
ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕುವ ಉದ್ದೇಶದಿಂದ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕ 2021 ಮಂಡಿಸಲಾಯಿತು. ಹೆಚ್ಚಿನ ವ್ಯಾಜ್ಯಗಳನ್ನು ತಪ್ಪಿಸಲು ಮತ್ತು ಸರ್ಕಾರದ ಸೊಸೈಟಿಯ ಸದಸ್ಯರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ವಿಧೇಯಕವನ್ನು ತರಲಾಗಿದೆ. ಹೊಸ ವಿಧೇಯಕದನ್ವಯ ಆಡಳಿತಾಧಿಕಾರಿಯು ಆತನ ನೇಮಕ ಅವಧಿಯ ಮುಕ್ತಾಯವಾಗುವ ಮೊದಲು ಸೊಸೈಟಿಯ ಸರ್ವಸದಸ್ಯರ ಸಭೆಯನ್ನು ಕರೆಯಲು ಮತ್ತು ಆಡಳಿತ ಮಂಡಳಿಯ ರಚನೆಗಾಗಿ ಚುನಾವಣೆಗಳನ್ನು ನಡೆಸಲು ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು.
ಕುಷ್ಠರೋಗವು ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಅದರಿಂದ ನರಳುತ್ತಿರುವ ವ್ಯಕ್ತಿಗಳ ವಿರುದ್ಧ ತಾರತಮ್ಯವನ್ನು ತೊಡೆದು ಹಾಕಲು ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಗಿದೆ. ಯಾವುದೇ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಮಾರುಕಟ್ಟೆಗೆ ಪ್ರವೇಶಿಸಲು ತಡೆಯುವಂತಿಲ್ಲ. ಯಾವುದೇ ವ್ಯಕ್ತಿಯು ಗಲಭೆ ಮಾಡಿದರೆ ಅಂತಹವರನ್ನು ಹೊರದೂಡಲು ಅವಕಾಶ ನೀಡಲಾಗಿದೆ.