ಬೆಂಗಳೂರು: ಕೇಂದ್ರ ಸರ್ಕಾರದ ವತಿಯಿಂದ 2018 ರ ಎನ್ಸಿಆರ್ಬಿ ಅಂಕಿ ಅಂಶ ಬಿಡುಗಡೆ ಆಗಿದ್ದು, ಈ ಅಂಕಿ ಅಂಶಗಳ ಪ್ರಕಾರ ನಿರುದ್ಯೋಗ ಸಮಸ್ಯೆಯಿಂದ ದೇಶದಲ್ಲಿ 2017 ವರ್ಷಕ್ಕಿಂತ 2018 ರಲ್ಲಿ 14% ಆತ್ಮಹತ್ಯೆ ಹೆಚ್ಚಳವಾಗಿದೆ.
2017 ರಲ್ಲಿ 2,404 ಆತ್ಮಹತ್ಯೆ ಪ್ರಕರಣಗಳು ಆಗಿದ್ದರೆ, 2018 ರಲ್ಲಿ 2,741 ಪ್ರಕರಣಗಳು ದಾಖಲಾಗಿದೆ. 2,431 ಪುರುಷರು ಹಾಗೂ 310 ಮಹಿಳೆಯರು ನಿರುದ್ಯೋಗ ಸಮಸ್ಯೆಯಿಂದ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈ ರಿಪೋರ್ಟ್ ವಿವರಿಸುತ್ತದೆ. ಅಷ್ಟೇ ಅಲ್ಲದೆ ಬಡತನ ಕಾರಣದಿಂದಲೂ ದೇಶದಲ್ಲಿ 2017 ರ ವರದಿ ಪ್ರಕಾರ 1,198 ಜನ ಆತ್ಮಹತ್ಯೆ ಮಾಡಿಕೊಂಡಿದ್ದು, 2018 ರಲ್ಲಿ 1,202 ಜನ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಎನ್ ಸಿ ಆರ್ ಬಿ ವರದಿಗೆ ಪ್ರತಿಕ್ರಿಯೆ ನೀಡಿದ ಸಿಪಿಐ ಮುಖಂಡ ಅನಂತ ಸುಬ್ಬರಾವ್, ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರದ ಬಡವರ ಮೇಲಿನ ಧೋರಣೆ ಸರಿ ಇಲ್ಲ, ಮಂದಿರ- ಮಸೀದಿ ಎಂದು ಮಾತನ್ನಾಡುವುದನ್ನ ಬಿಟ್ಟು ಉದ್ಯೋಗ ಸೃಷ್ಟಿಸಲಿ ಎಂದು ಕಿವಿಮಾತು ಹೇಳಿದರು.
ದೇಶದಲ್ಲಿ ನಿರುದ್ಯೋಗ ಹಾಗೂ ಬಡತನ ಹೆಚ್ಚಾಗುತ್ತಿದೆ. ವರದಿ ತಯಾರು ಮಾಡುವವರು ಯೋಜನಾ ಭವನದಲ್ಲಿ ಕೂತು ವರದಿ ತಯಾರು ಮಾಡುತ್ತಾರೆ. ನಾವು ಗ್ರೌಂಡ್ ವರ್ಕ್ ಮಾಡುವವರು, ಪೀಣ್ಯ ಕೈಗಾರಿಕೆಗಳು ಮುಚ್ಚಿದೆ, ಇಲ್ಲೇ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಅನಂತ ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿ, ಕೃಷಿ ವಲಯದಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡಲಿ, ಜನರಿಗೆ ಖರೀದಿ ಸಾಮರ್ಥ್ಯ ಹೆಚ್ಚಿಸಬೇಕು. ಈ ನಿಟ್ಟಿನಲ್ಲೇ ಸರ್ಕಾರ ಕೆಲಸ ಮಾಡಬೇಕು ಎಂದು ಇವರು ತಿಳಿಸಿದರು.