ಬೆಂಗಳೂರು: ಮನೆ ಮಾಲೀಕನ ಮಗನ ಹೆಸರಿನಲ್ಲಿ ಡೆತ್ ನೋಟ್ ಬರೆದು ಫ್ಯಾನ್ಗೆ ನೇಣು ಬಿಗಿದುಕೊಂಡು 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈತನ ತಂದೆ ಸಿದ್ದರಾಜು ಲಾರಿ ಚಾಲಕರಾದರೆ, ತಾಯಿ ಲಿಂಗಮ್ಮ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೂಲತಃ ಮಂಡ್ಯದರಾಗಿದ್ದು, ಕಳೆದೊಂದು ವರ್ಷದ ಹಿಂದೆ ಬಸವೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಕೊರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಶಾಲೆಗೆ ಹೋಗಿರಲಿಲ್ಲ. ಎಲ್ಲಾ ಮಕ್ಕಳಂತೆ ಈತನು ಮನೆ ಮುಂದೆ ಆಟವಾಡುತ್ತಿದ್ದ.
ಬುಧವಾರ ತಂದೆ-ತಾಯಿ ಇಲ್ಲದಿರುವುದನ್ನು ಗಮನಿಸಿ ಸ್ನೇಹಿತರಿಗೆ ಸಾಯುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದಾನೆ. ದರ್ಶನ್ ಮಾತು ಸ್ನೇಹಿತರಿಗೆ ಅರ್ಥವಾಗಿರಲಿಲ್ಲ. ಬಳಿಕ ಮನೆಯೊಳಗೆ ಬಂದು ಫ್ಯಾನ್ ಹಗ್ಗ ಕಟ್ಟಿಕೊಂಡು ಸಾವನ್ನಪ್ಪಿದ್ದಾನೆ. ಕೆಲಸ ಮುಗಿಸಿ ಮನೆಗೆ ಬಂದ ಪೋಷಕರು, ಮಗ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.
ಮನೆ ಮಾಲೀಕನ ಮಗನ ಹೆಸರಿನಲ್ಲಿ ಡೆತ್ ನೋಟ್:
ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದೆ. ಬಾಲಕ ತಾನು ವಾಸ ಮಾಡುತ್ತಿದ್ದ ಮನೆ ಮಾಲೀಕನ ಮಗನ ಹೆಸರಿನಲ್ಲಿ ಡೆತ್ ನೋಟ್ ಬರೆದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮೃತನ ಪೋಷಕರಿಗೆ ಪ್ರಶ್ನಿಸಿದರೆ, ಇದು ನಮ್ಮ ಮಗನ ಹ್ಯಾಂಡ್ ರೈಟಿಂಗ್ ಅಲ್ಲ ಎಂದು ಹೇಳಿದ್ದಾರೆ.
ಮನೆ ಮಾಲೀಕರಿಗೆ ಪ್ರಶ್ನಿಸಿದಾಗ, ನಮ್ಮ ಮಗ ರಜೆ ಅವಧಿಯಲ್ಲಿ ತನ್ನ ಅಜ್ಜಿ ಮನೆಗೆ ಹೋಗಿದ್ದ. ನಿನ್ನೆಯಷ್ಟೇ ಮನೆಗೆ ಬಂದಿದ್ದ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಪೊಲೀಸರು ಬಾಲಕನ ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಗೊಂದಲ: ಸಿದ್ದರಾಮಯ್ಯ ಹೇಳಿದ್ದೇನು?