ಬೆಂಗಳೂರು: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಶೇ 10ರಷ್ಟು ಹೆಚ್ಚು ಲಾಭ ಗಳಿಸಿದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ನ ಶಾಸಕರ ಭವನದಲ್ಲಿ ಆಯೋಜನೆಗೊಂಡಿದ್ದ 18 ರಿಂದ 44 ವಯಸ್ಸಿನವರಿಗೆ 3 ದಿನಗಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಲಾಕ್ಡೌನ್ ಆದ ಬಳಿಕ ಅಂದರೆ ಏಪ್ರಿಲ್ 1ರಿಂದ ಜೂನ್ 15 ರವರೆಗೆ ಅಬಕಾರಿ ಇಲಾಖೆಗೆ 4,500 ಕೋಟಿ ವರಮಾನ ಬಂದಿದೆ. ಇದರಿಂದ ಸಾಮಾನ್ಯ ದಿನಗಳಿಗಿಂತ ಶೇ 10ರಷ್ಟು ಹೆಚ್ಚು ಲಾಭ ಬಂದಂತಾಗಿದೆ ಎಂದು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯಲ್ಲಿ 3 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಇಂದಿನ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದು, ದೊಡ್ಡ-ದೊಡ್ಡ ಸಂಸ್ಥೆಗಳು ಸಿಎಸ್ಆರ್ ಫಂಢ್ನ ಮೂಲಕ ಜನ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಇನ್ನು, ವಿಶ್ವ ಯೋಗ ದಿನವಾದ ಇಂದು ಪ್ರಧಾನಿ ಮೋದಿ ಪ್ರೇರಣೆ ಮೇರೆಗೆ 175ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗ ಮಾಡುವುದರಿಂದ ಕೋವಿಡ್ನಂತಹ ಮಾರಕ ರೋಗಗಳನ್ನು ದೂರ ಇಡಬಹುದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ರಮೇಶ ಜಾರಕಿಹೊಳಿ ಮುಂಬೈಗೆ ಹೋಗಿಲ್ಲ: ಶಾಸಕ ಕುಮಟಳ್ಳಿ