ಹೊಸಪೇಟೆ: ರಾಜ್ಯ ಬಜೆಟ್ ಮೇಲೆ ವಿಜಯನಗರ ಜಿಲ್ಲೆಯ ಜನರು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಸರ್ಕಾರ ಯಾವೆಲ್ಲಾ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯನಗರ ಜಿಲ್ಲೆ ವ್ಯಾಪ್ತಿಗೆ 6 ತಾಲೂಕುಗಳು ಬರುತ್ತವೆ. ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ. ಈ ತಾಲೂಕುಗಳಲ್ಲಿರುವ ಜನರ ಜೀವನ ಮಟ್ಟ ಸುಧಾರಿಸುವ ಕೆಲಸವಾಗಬೇಕಿದ್ದು, ಈಗಾಗಲೇ ಕೊರೊನಾದಿಂದ ಜನರು ತತ್ತರಿಸಿದ್ದಾರೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಹೆಚ್ಚಿಸುವ ಕೆಲಸವಾಗಬೇಕಾಗಿದೆ. ಜೊತೆಗೆ ಇಲ್ಲಿನ ಪ್ರವಾಸೋದ್ಯಮ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂದು ಕಾದುನೋಡಬೇಕಿದೆ.
ನೂತನ ವಿಜಯನಗರ ಜಿಲ್ಲೆಯಲ್ಲಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು, ವಿಶ್ವ ವಿಖ್ಯಾತ ಹಂಪಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಅಪೌಷ್ಟಿಕತೆ ಹೋಗಲಾಡಿಸಲು ಹೆಚ್ಚಿನ ಒತ್ತು ನೀಡಬೇಕು. ಮತ್ತು ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಸಾಲ ಸೌಲಭ್ಯವನ್ನು ಒದಗಿಸುವ ಕಾರ್ಯವಾಗಬೇಕಾಗಿದೆ ಎಂದು ಇಲ್ಲಿನ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಅಳಿವು, ಉಳಿವಿನಲ್ಲಿದ್ದು, ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಒದಗಿಸಬೇಕು. ದರೋಜಿ ಕರಡಿ ಧಾಮಕ್ಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಹೊಸಪೇಟೆಯಲ್ಲಿ 12 ಸಾವಿರ ಜನರು ವಸತಿ ಸೌಲಭ್ಯದಿಂದ ವಂಚಿತರಾಗಿದ್ದು, ಅವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸುವ ಕಾರ್ಯವಾಗಬೇಕಾಗಿದೆ. ಇದಕ್ಕೆ 500 ಎಕರೆ ಜಾಗ ಖರೀದಿ ಮಾಡಲು ಅನುದಾನ ಕಲ್ಪಿಸಬೇಕು. ಹಾಗೂ ಅಟಲ್ ಬಿಹಾರಿ ಜೂಯಾಲಜಿಕಲ್ ಪಾರ್ಕ್ ಅಭಿವೃದ್ಧಿಗೆ ಹೆಚ್ವಿನ ಒತ್ತು ನೀಡಬೇಕು ಎಂಬ ನಿರೀಕ್ಷೆಗಳನ್ನು ವಿಜಯನಗರ ಜಿಲ್ಲೆಯ ಜನರ ಇಟ್ಟುಕೊಂಡಿದ್ದಾರೆ.