ಬೆಳಗಾವಿ: ಬಿಇ, ಬಿಟೆಕ್, ಬಿಪ್ಲಾನ್ 8ನೇ ಸೆಮಿಸ್ಟರ್ ಹಾಗೂ ಆರ್ಕಿಟೆಕ್ಚರ್‌ನ 10ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಹಾಗೂ ಸ್ನಾಕ್ತೋತ್ತರ ಪದವಿಗಳ ಎಂಟೆಕ್, ಎಂಆರ್ಚ್, ಎಂಬಿಎ ಹಾಗೂ ಎಂಸಿಎಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಯುಜಿಯ ಮಾರ್ಗದರ್ಶನದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಈಗಾಗಲೇ ತಿಳಿಸಿದ ಪರೀಕ್ಷಾ ವೇಳಾಪಟ್ಟಿಯಂತೆ ಜುಲೈ 26ರಿಂದ ಆಫ್‌ಲೈನ್ ಮೋಡ್‌ನಲ್ಲಿ ನಡೆಸಲಾಗುವುದು ಎಂದು ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ 2ನೇ ಅಲೆಯಿಂದ ಬಿಇ, ಬಿಟೆಕ್, ಬಿಪ್ಲಾನ್ ಪದವಿಗಳ ಪ್ರಥಮ ಸೆಮಿಸ್ಟರ್ ಬಾಕಿ ಉಳಿದ ವಿಷಯಗಳಿಗೆ ಹಾಗೂ ಸ್ನಾತಕೋತ್ತರ ಎಂಬಿಎ, ಎಂಸಿಎ, ಎಂಟೆಕ್, ಎಂ ಆರ್ಚ್ ಪದವಿಗಳ ವಿಷಯಗಳ ಬಾಕಿ ಇರುವ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಸಹ ಹಿಂದೆ ತಿಳಿಸಿದ ಮಾದರಿಯಲ್ಲೇ ಜುಲೈ 27ರಿಂದ ನಡೆಸಲಾಗುವುದು ಎಂದರು.
ಬಿಇ, ಬಿಟೆಕ್, ಬಿ.ಪ್ಲಾನ್ ಪದವಿಗಳ 2, 4 ಹಾಗೂ 6ನೇ ಸೆಮಿಸ್ಟರ್‌ಗಳ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಎ, ಎಂ ಆರ್ಚ್ ಹಾಗೂ ಎಂಟೆಕ್ 2ನೇ ಸೆಮಿಸ್ಟರ್ ಹಾಗೂ ಎಂಸಿಎ ಮತ್ತು ಪಾರ್ಟ್‌ಟೈಂ ಎಂಟೆಕ್‌ಗಳ 2 ಹಾಗೂ 4ನೇ ಸೆಮಿಸ್ಟರ್‌ಗಳ ಫಲಿತಾಂಶವನ್ನು ಯುಜಿಸಿ, ಎಐಸಿಟಿಇ ಮಾರ್ಗಸೂಚಿ ಪ್ರಕಾರ ನೀಡಲಾಗುವುದು. ಎಲ್ಲ ಸೆಮಿಸ್ಟರ್‌ಗಳ ತರಗತಿ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು. ಬಾಕಿ ಉಳಿದ ಪಠ್ಯವನ್ನು ಆಫ್‌ಲೈನ್ ಮೋಡ್‌ನಲ್ಲೂ ನಡೆಸಲಾಗುವುದು. ಆಫ್‌ಲೈನ್ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಬಹುದು ಎಂದು ತಿಳಿಸಿದರು.
ರಾಜ್ಯಾದ್ಯಂತ 200ಕ್ಕಿಂತ ಹೆಚ್ಚಿನ ಕಾಲೇಜಿನಲ್ಲಿ ಶೇ.88.88 ಸಿಬ್ಬಂದಿಗೆ ಹಾಗೂ ಶೇ.72.83ರಷ್ಟು ವಿದ್ಯಾರ್ಥಿಗಳು ಕರೊನಾ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.