ಬಳ್ಳಾರಿ: ಗಣಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಮೇಳೈಸಿದೆ. ಮುಸ್ಲಿಂ ಧರ್ಮೀಯರ ಸಾಮೂಹಿಕ ಪ್ರಾರ್ಥನೆಗೆ ಕಡ್ಡಾಯವಾಗಿ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯಗಳನ್ನು ಬಳಸುತ್ತಿರುವುದು ಗಮನರ್ಹ.
ರಂಜಾನ್ ಹಬ್ಬದ ಸಂಭ್ರಮ ಸಮೀಪಿಸುತ್ತಿದ್ದಂತೆಯೇ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯ ಖರೀದಿ ಜೋರಾಗಿ ನಡೆಯುತ್ತೆ. ಶುಭ್ರಬಟ್ಟೆ ಹಾಗೂ ಸುಗಂಧದ್ರವ್ಯಕ್ಕೆ ಈ ಹಬ್ಬದಲ್ಲಿ ಮೊದಲ ಆದ್ಯತೆ. ಅದರ ಖರೀದಿಗೆ ಈಗಾಗಲೇ ಮುಸ್ಲಿಂ ಬಾಂಧವರು ಪೂರ್ವ ತಯಾರಿ ಮಾಡಿಕೊಂಡಿದ್ದಾರಂತೆ. ಈ ವಾರದಲ್ಲಿ 4ನೇ ಜಾಗರಣೆ (ಸತಾವಿ)ಯನ್ನು ಆಚರಿಸಲಾಗುತ್ತದೆ. ಅದರಲ್ಲಿ ಮಹಿಳೆಯರೂ ಸೇರಿ ಎಲ್ಲರೂ ಒಗ್ಗೂಡಿ ಜಾಗರಣೆ ಮಾಡ್ತಾರೆ. ಇಡೀ ರಾತ್ರಿ ಸತಾವಿ ಸಂಭ್ರಮದಲ್ಲಿ ಮುಳುಗಿ ತೇಲಲಿದ್ದಾರೆ. ಅಷ್ಟೇ ಅಲ್ಲ, ಆ ದಿನ ರಾತ್ರಿ ಕಾಶ್ಮೀರಿ ವೈಟ್ ಸೇರಿದಂತೆ ಇನ್ನಿತರೆ ಸುಗಂಧದ್ರವ್ಯ (ಅಖ್ತರ್) ಹಾಗೂ ಶುಭ್ರಬಟ್ಟೆಯನ್ನು ತೊಟ್ಟು ಅತ್ಯಂತ ಸಂಭ್ರಮದಿಂದ ಸತಾವಿ ಆಚರಿಸಲಿದ್ದಾರೆ.
ಈ ಕುರಿತು ಮಾತನಾಡಿದ ನಯಾಜ್ ಅಹ್ಮದ್, ಶುಭ್ರಬಟ್ಟೆ ಹಾಗೂ ಸುಗಂಧದ್ರವ್ಯ ಲೇಪನ ರಂಜಾನ್ ಹಬ್ಬದ ವಿಶೇಷತೆ. ಅತ್ಯುತ್ತಮ ಕಂಪನಿಯ ಸುಗಂಧ ದ್ರವ್ಯಗಳು (ಅಖ್ತರ್) ನಮ್ಮ ಅಂಗಡಿಯಲ್ಲಿ ದೊರೆಯುತ್ತವೆ. ರಂಜಾನ್ ಹಬ್ಬದ ಮುನ್ನಾ ದಿನವೇ ಈ ಸುಗಂಧ ದ್ರವ್ಯದ ಖರೀದಿಯ ಭರಾಟೆ ಜೋರಾಗಿರುತ್ತೆ. ಅತ್ಯಂತ ದುಬಾರಿ ಸುಗಂಧ ದ್ರವ್ಯ ಕೂಡ ನಮ್ಮಲ್ಲಿ ಲಭ್ಯ. ಎಲ್ಲಾ ಮುಸ್ಲಿಂ ಧರ್ಮೀಯರೂ ನಮ್ಮ ಅಂಗಡಿಯಲ್ಲೇ ಖರೀದಿಸುತ್ತಾರೆ. ಸತತ 50 ವರ್ಷಗಳಿಂದ ಈ ಸುಗಂಧ ದ್ರವ್ಯಗಳ ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ. ಅತ್ತರ್ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ ಎಂದರು.
ಸುಗಂಧ ದ್ರವ್ಯ ಲೇಪನವು ಮುಸ್ಲಿಂ ಧರ್ಮೀಯರಿಗೆ ಪ್ರಿಯವಾದದ್ದಾಗಿದೆ. ರಂಜಾನ್ ಹಬ್ಬದಲ್ಲಿ ಅತ್ಯಾಧುನಿಕ ಕಂಪನಿಗಳ ಸುಗಂಧ ದ್ರವ್ಯ ಪರಿಚಯವಾಗಲಿದೆ. ಇಂತಹ ಸುಗಂಧ ದ್ರವ್ಯಕ್ಕೆ ಬಹುಬೇಡಿಕೆಯಿದೆ ಎಂದು ಮದೀನಾ ಪುಸ್ತಕ ಅಂಗಡಿ ಮಾಲೀಕ ರಫೀಕ್ ಮಹಮ್ಮದ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.