ಬಳ್ಳಾರಿ : ಬಳ್ಳಾರಿಯ ಬಿಎಸ್ಎನ್ಎಲ್ ಕಚೇರಿಯ ಆವರಣದಲ್ಲಿರುವ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಸ್ಮಾರ್ಟ್ ಇ-ಬಿಟ್ಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿನಿಂದ ವರ್ಚುವಲ್ ಮೂಲಕ ಇಂದು ಉದ್ಘಾಟಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಈ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಒಳಪಡಲಿವೆ. ಬಳ್ಳಾರಿಯಲ್ಲಿ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಸ್ಥಾಪನೆಯಾಗುವುದರಿಂದ ಇದುವರೆಗೆ ಕಲಬುರಗಿ ಎಫ್‌ಎಸ್‌ಎಲ್ ಮೇಲಿದ್ದ ಒತ್ತಡ ಕಡಿಮೆಯಾಗಲಿದೆ.
ತ್ವರಿತ ಫೋರೆನ್ಸಿಕ್ ವರದಿಗಳು ಲಭ್ಯವಾಗಲಿವೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ರಾಜ್ಯ ಸರಕಾರ ಈ ಎಫ್ಎಸ್ಎಲ್ ಕೇಂದ್ರಕ್ಕೆ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ಅಗತ್ಯ ಸೌಕರ್ಯ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು,ಇನ್ನೂ ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಜಿಲ್ಲಾಡಳಿತ ಒದಗಿಸಲಿದೆ ಎಂದರು.
ಎಸ್ಪಿ ಸೈದುಲು ಅಡಾವತ್ ಅವರು ಮಾತನಾಡಿ, ಇದುವರೆಗೆ ಒಂದು ವರದಿ ಬರಬೇಕಾದರೇ ಎರಡು ತಿಂಗಳಾಗುತ್ತಿತ್ತು. ಇನ್ಮುಂದೆ ಹದಿನೈದು ದಿನಗಳಿಂದ ತಿಂಗಳೊಳಗೆ ವರದಿ ಕೈಸೇರಲಿದೆ. ಬಜೆಟ್ನಲ್ಲಿ ಘೋಷಣೆಯಾದ ಎರಡು ತಿಂಗಳಲ್ಲಿಯೇ ಎಫ್ಎಸ್ಎಲ್ ಕೇಂದ್ರವನ್ನು ಬಳ್ಳಾರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ನಾಳೆಯಿಂದಲೇ ಈ ಲ್ಯಾಬ್ ಕಾರ್ಯನಿರ್ವಹಿಸಲಿದೆ. ಎಲ್ಲ ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯಗಳನ್ನು ಸರಕಾರ ಒದಗಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಜಿ.ಲಿಂಗಮೂರ್ತಿ,ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ಡಾ.ಆಕಾಶ್, ಡಿವೈಎಸ್ಪಿ ರಮೇಶಕುಮಾರ್ ಸೇರಿದಂತೆ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಬಸವಶ್ರೀ ಪುರಸ್ಕಾರ ಪ್ರದಾನ; ಪತ್ನಿಯಿಂದ ಪ್ರಶಸ್ತಿ ಸ್ವೀಕಾರ