ಬಳ್ಳಾರಿ, ಹಾವೇರಿ, ಬಾಗಲಕೋಟೆ: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ರಾಜ್ಯದ ವಿವಿಧೆಡೆ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ.
ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಬಳಿಕ ಡಿಸಿಗೆ ಮನವಿ ಪತ್ರ ಸಲ್ಲಿಸಲಾಯಿತು. ದೇಶದಲ್ಲಿ ಹೆಣ್ಣಿನ ಮೇಲೆ ಶೋಷಣೆ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದನ್ನು ಪ್ರಶ್ನಿಸಿದರೆ ಪ್ರಭಾವಿ ವ್ಯಕ್ತಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜನ್ಮ ಭೂಮಿ ರಕ್ಷಣಾ ಪಡೆಯ ಅಧ್ಯಕ್ಷ ಮಧುಸೂದನ್ ದೂರಿದರು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸಬೇಕೆಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.
ಬಾಗಲಕೋಟೆಯಲ್ಲಿಯೂ ಕೂಡ ಜಿಲ್ಲಾ ವಿಶ್ವಕರ್ಮ ಮಹಾಸಭಾದಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಡಳಿತ ಭವನದಲ್ಲಿ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಗನ್ನಾಥಸ್ವಾಮಿ ಶ್ರೀ ಮಹಾಪುರುಷ ಅವರ ನೇತೃತ್ವದಲ್ಲಿ ಮೌನೇಶ್ ಪತ್ತಾರ ಕೆರೂರ, ನಾಗೇಶ್ ಬರಗಿ, ಪಂಚಕಮಟಿ ಅಧ್ಯಕ್ಷ ವಿ.ವಿ ಪತ್ತಾರ, ನಾಗರಾಜ ಬಡಿಗೇರ, ಈರಣ್ಣ ಪತ್ತಾರ ಬೇವೂರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇನ್ನು ವಿದ್ಯಾರ್ಥಿನಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಹಾವೇರಿಯ ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯಿಂದಲೂ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಲಾಯಿತು.