ಬಳ್ಳಾರಿ: ಹನುಮಾನ್ ನಗರ ಮತ್ತು ವಿಶಾಲ್ ನಗರದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಮಹಾನಗರಪಾಲಿಕೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.
ನಗರದ ಮಹಾನಗರ ಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಸೋಮಶೇಖರ ಗೌಡ, ಮಳೆ ಬಂದರೆ ಒಳಚರಂಡಿಗಳು ತುಂಬಿದ್ದು, ಚರಂಡಿ ನೀರು ಮನೆ ಒಳಗೆ ಬರುತ್ತದೆ. ಪ್ಲಾಟ್ಗಳಲ್ಲಿ ನೀರು ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಮುಖ್ಯವಾಗಿ ಬಳ್ಳಾರಿಯ ಹನುಮಾನ್ ನಗರ ಮತ್ತು ವಿಶಾಲ್ ನಗರದಲ್ಲಿ ತುಂಬಾ ಸಮಸ್ಯೆಯುಂಟಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಮನವಿಪತ್ರ ಕೊಟ್ಟರೂ ಸಹ ಮಹಾನಗರ ಪಾಲಿಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ಆ ಪ್ರದೇಶದಲ್ಲಿ ನೀರು ಹೆಚ್ಚಾಗಿ ನಿಲ್ಲುವುದರಿಂದ ರೋಗ ಹರಡುವ ಆತಂಕ ಎದುರಾಗಿದೆ. ಆದ್ದರಿಂದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಸೋಮಶೇಖರ ಗೌಡ, ಮುಖಂಡರಾದ ಡಾ. ಪ್ರಮೋದ್, ಬಡಾವಣೆಯ ನಾಗರಿಕರಾದ ಮಹಮ್ಮದ್ ಜಾಫರ್, ಗಫೂರ್ ಮಲ್ಲಿಕಾರ್ಜುನ, ಲಕ್ಷ್ಮೀನಾರಾಯಣ ,ಪ್ರಹ್ಲಾದ್, ರವಿ ಜೋಷಿ ,ಸಿರಾಜ್, ಮುಂತಾದವರು ಭಾಗವಹಿಸಿದ್ದರು.