ನವದೆಹಲಿ: ದೆಹಲಿ ಚುನಾವಣೆ ಘೋಷಣೆಗೆ ಮುನ್ನ ಮಂಗಳವಾರ ಎಎಪಿ ತನ್ನ ಚುನಾವಣಾ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ. ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸುವ ಹಾಡನ್ನು ಅನಾವರಣ ಮಾಡಿದ್ದಾರೆ.
'ಫಿರ್ ಲಾಯೆಂಗೆ ಕೇಜ್ರಿವಾಲ್' (ಮತ್ತೊಮ್ಮೆ ಕೇಜ್ರಿವಾಲ್ರನ್ನು ಅಧಿಕಾರಕ್ಕೆ ತರುತ್ತೇವೆ) ಎಂಬ 3.29 ನಿಮಿಷದ ಹಾಡಿನಲ್ಲಿ ಎಎಪಿ ತನ್ನ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.
Phir Layenge Kejriwal 🎺🎶
— AAP (@AamAadmiParty) January 7, 2025
Our Campaign Song - Out Now ❤️🔥 pic.twitter.com/41fwimC1Qj
ಈ ಹಾಡು ಬಿಡುಗಡೆ ಮಾಡಿ ಮಾತನಾಡಿರುವ ಕೇಜ್ರಿವಾಲ್ ಅವರು, ನಾವು ಚುನಾವಣೆಯನ್ನು ಹಬ್ಬದ ರೀತಿ ಸಂಭ್ರಮಿಸುತ್ತೇವೆ. ಜನರು ಈ ಹಾಡಿಗಾಗಿ ಕಾದಿದ್ದರು. ಇದೀಗ ಹಾಡು ಬಿಡುಗಡೆಯಾಗಿದ್ದು ಜನರು ಕುಣಿಯಲಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ನಾಯಕರ ಕಾಲೆಳೆದ ಕೇಜ್ರಿವಾಲ್, ಬಿಜೆಪಿ ನಾಯಕರು ಕೂಡ ಈ ಹಾಡನ್ನು ಇಷ್ಟಪಡುತ್ತಾರೆ. ಅವರ ಕೋಣೆಯಲ್ಲಿ ನಮ್ಮ ಹಾಡಿಗೆ ಅವರು ನೃತ್ಯ ಮಾಡುತ್ತಾರೆ ಎಂದು ಕಾಲೆಳೆದರು.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಅತಿಶಿ, ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸೌರಬ್ ಭರದ್ವಾಜ್, ಗೋಪಾಲ್ ರೈ ಮತ್ತು ಸಂಜಯ್ ಸಿಂಗ್ ಮತ್ತಿತರರು ಹಾಜರಿದ್ದರು. ಈ ಪ್ರಚಾರದ ಹಾಡು ಬಿಡುಗಡೆ ಮಾಡುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಆಪ್ ಮತ್ತೊಮ್ಮೆ ಅಧಿಕಾರ ಹಿಡಿಯುವ ಎಲ್ಲಾ ಪ್ರಯತ್ನವನ್ನು ಮುಂದುವರೆಸಿದೆ. ಈಗಾಗಲೇ ಎರಡು ಬಾರಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಎಎಪಿ ಮೂರನೇ ಬಾರಿ ಕೂಡ ದೆಹಲಿ ಗದ್ದುಗೆ ಏರಲು ಚುನಾವಣಾ ತಂತ್ರ ರೂಪಿಸಿದೆ.
ಹಾಡಿನಲ್ಲಿ ಎಎಪಿ ತಮ್ಮ ಚುನಾವಣಾ ಭರವಸೆಗಳ ಕುರಿತು ಹೇಳುವ ಜೊತೆಗೆ ತನ್ನ ಸರ್ಕಾರದ ಸಾಧನೆಯನ್ನು ಹೇಳಿಕೊಂಡಿದೆ. ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ದೆಹಲಿ ಮಹಿಳೆಯರಿಗೆ 2,100 ರೂ. ಮಾಸಿಕ ಧನಸಹಾಯ ನೀಡುವುದು ಹಾಗೂ ಎಲ್ಲಾ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಭರವಸೆಯನ್ನು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ವಿವರಿಸಿದ್ದಾರೆ.
ಈಗಾಗಲೇ ಹಲವು ಯೋಜನೆಗಳನ್ನು ಪ್ರಕಟಿಸಿರುವ ಎಎಪಿ 70 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕೂಡ ಘೋಷಣೆ ಮಾಡಿದೆ.
ಇದನ್ನೂ ಓದಿ: ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಇಂದು