ಬಳ್ಳಾರಿ: ನಗರದಲ್ಲಿ 15ರಿಂದ 20 ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದ್ದು, ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಮಹಾನಗರ ಪಾಲಿಕೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲೆಯ ಮೋಕ ಮತ್ತು ಅಲ್ಲಿಪುರ ಪ್ರದೇಶದಲ್ಲಿ ನೀರು ಇದೆ. ಅದನ್ನು ಸರಬರಾಜು ಮಾಡುವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂದು ನೀರು ಸರಬರಾಜು ಅವ್ಯವಸ್ಥೆ ಬಗ್ಗೆ ಮಹಾನಗರ ಉಸ್ತುವಾರಿ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದರು.
ಇನ್ನು ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕು. ಚರಂಡಿ ಮಿಶ್ರಿತ ನೀರು, ಕುಡಿಯುವ ನೀರಿನ ಪೈಪ್ಗಳಲ್ಲಿ ಬರದಂತೆ ತಡೆಯಲು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು. ಅವ್ಯವಸ್ಥೆಯ ಆಗರವಾಗಿರುವ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಬೇಕು. ಅವಶ್ಯಕತೆಗೆ ತಕ್ಕಂತೆ ನೀರಿನ ಸಿಬ್ಬಂದಿ ಸಂಖ್ಯೆ ಹಾಗೂ ಮೇಲ್ವಿಚಾರಕರನ್ನು ನೇಮಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.
ಈ ವೇಳೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರಾದ ಆರ್.ಸೋಮಶೇಖರ ಗೌಡ, ಮಂಜುಳ, ಗೋವಿಂದ, ಎ.ದೇವದಾಸ್, ಡಾ. ಪ್ರಮೋದ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.