ಬಳ್ಳಾರಿ: ಮನೆಯ ಮುಂದೆ ಮಂಚದ ಮೇಲೆ ನಿದ್ರಿಸುತ್ತಿದ್ದ ಯುವಕನನ್ನು ಕೊಲೆಗೈದ ದುಷ್ಕರ್ಮಿಗಳು, ಮನೆಯೊಳಗೆ ನುಗ್ಗಿ ಹಣ,ಆಭರಣಗಳನ್ನು ದೋಚಿ ಪರಾರಿಯಾದ ಘಟನೆ ಬಳ್ಳಾರಿ ತಾಲೂಕಿನ ಹಂದ್ಯಾಳು ಗ್ರಾಮದಲ್ಲಿ ನಡೆದಿದೆ.
ಹಂದ್ಯಾಳು ಗ್ರಾಮದ ಹುಲಿಯಪ್ಪ (20) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮನೆ ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು ಮಂಚದ ಮೇಲೆ ಮಲಗಿದ್ದ ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಹುಲಿಯಪ್ಪ ಮುಖದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದೆ.
ಹುಲಿಯಪ್ಪನ ಕೊಲೆಯ ಬಳಿಕ, ಮನೆಯ ಮಹಡಿ ಮೇಲೆ ಮಲಗಿದ್ದ ತಾಯಿ ಗಾದಿಲಿಂಗಮ್ಮನ ಕೊರಳಲ್ಲಿದ್ದ ಚಿನ್ನಾಭರಣ, ಮಾಂಗಲ್ಯ ಸರ, ಮನೆಯ ತಿಜೋರಿಯಲ್ಲಿದ್ದ 52,000 ರೂ. ನಗದು ಸೇರಿದಂತೆ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ಬಿ. ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.