ಬಳ್ಳಾರಿ: ನನಗಿಷ್ಟವಾದ ಖಾತೆ ಹಂಚಿಕೆಯಾಗಿಲ್ಲ ಎಂದು ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯ ಸರ್ಕಾರಿ ಅತಿಥಿ ಗೃಹದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವಾಸೋದ್ಯಮ ಖಾತೆ ಹಂಚಿಕೆ ಮಾಡಿರೋದು ನನಗಿಷ್ಟವಿಲ್ಲ. ನಾನು ನಿರೀಕ್ಷಿಸಿದ ಖಾತೆಯನ್ನ ಮುಖ್ಯಮಂತ್ರಿಗಳು ನನಗೆ ಹಂಚಿಕೆ ಮಾಡಿಲ್ಲ. ನನಗೆ ಇದರ ಬಗ್ಗೆ ನೋವಿದೆ ಎಂದರು.
ನಾಳೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮತ್ತೊಮ್ಮೆ ಬೇಡಿಕೆ ಇಡುತ್ತೇನೆ. ನನಗಿಷ್ಟವಾದ ಖಾತೆಯನ್ನ ಹಂಚಿಕೆ ಮಾಡ್ತಾರೆ ಇಲ್ಲವೋ ಅಂತ ಕಾದು ನೋಡೋಣ. ನನಗೆ ಖಾತೆ ಬದಲಾವಣೆ ಮಾಡಿಕೊಡ್ತಾರೆ ಅಂತ ಮುಖ್ಯಮಂತ್ರಿಗಳ ಮೇಲೆ ಅಪಾರ ನಂಬಿಕೆ ಇದೆ ಎಂದು ಹೇಳಿದರು.
ಹಾಗೊಂದು ವೇಳೆ ಖಾತೆ ಬದಲಾವಣೆ ಮಾಡಿ ಕೊಡದೇ ಇದ್ದರೆ ನೋಡೋಣ ಏನು ಮಾಡಬೇಕೋ ಅಂತ ಆಮೇಲೆ ನಿರ್ಧರಿಸುವೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಸಾರಿಗೆ ಖಾತೆ ಬಗ್ಗೆ ಶ್ರೀರಾಮುಲೂಗೂ ನಿರಾಸೆಯಂತೆ?
ಸಾರಿಗೆ ಖಾತೆ ನೀಡಿದ್ದಕ್ಕೆ ಶ್ರೀರಾಮುಲು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿಎಂ ಸ್ಥಾನವೂ ನೀಡಲಿಲ್ಲ, ಈಗ ಕೇಳಿದ್ದ ಸಮಾಜ ಕಲ್ಯಾಣ ಖಾತೆಯೂ ಸಿಗಲಿಲ್ಲ ಎಂದು ಆಪ್ತರ ಬಳಿ ರಾಮುಲು ಅಸಮಾಧಾನ ತೊಡಗಿಕೊಂಡಿದ್ದಾರಂತೆ.