ಬಳ್ಳಾರಿ: ಕೋವಿಡ್-19 ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಶಾಬ್-ಇ-ಬರಾತ್ ದಿನದಂದು ಮಸೀದಿಗಳಲ್ಲಿ ಪ್ರಾರ್ಥನೆ, ಖಬ್ರಸ್ಥಾನ/ದರ್ಗಾಗಳಲ್ಲಿ ಧಾರ್ಮಿಕ ವಿಧಿಗಳ ಆಚರಣೆಗೆ ನಿಷೇಧ ಹೇರಲಾಗಿದೆ.
ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಲಾಕ್ಡೌನ್ ಮತ್ತು ಕೊರೊನಾ ಸೋಂಕು ತಡೆಗೆ ಈ ಆದೇಶ ಹೊರಡಿಸಲಾಗಿದೆ. ಇದಕ್ಕೆ ಮುಸ್ಲಿಂ ಸಮುದಾಯ ಸಹಕರಿಸಬೇಕು ಎಂದು ಕೋರಿದರು.
ಶಾಬ್-ಇ- ಬರಾತ್ ಹಿನ್ನೆಲೆ ಗುಂಪು ಸೇರುವಂತಿಲ್ಲ. ಮನೆಯಲ್ಲಿಯೇ ಪ್ರಾರ್ಥನೆ ಮಾಡಿ. ಈ ಕುರಿತು ಎಲ್ಲರಿಗೂ ಅರಿವು ಮೂಡಿಸಿ. ನಿಯಮ ಉಲ್ಲಂಘಿಸಿದರೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೋಗಿ-151 ಲಾಲ್‌ಕಮಾನ್ ಮತ್ತು ತಲಾಬ್ ಕಮಾನ್ ಮಸೀದಿಗಳ ಸಮೀಪ ಓಡಾಡಿರುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಟ್ಯಾಂಕ್ ಬಂಡ್ ಹತ್ತಿರ ಫೀವರ್ ಕ್ಲಿನಿಕ್ ತೆರೆಯಲಾಗಿದೆ. ಸಂಶಯ ಇರುವವರು ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದರು.
ಎಸ್ಪಿ ಸಿ.ಕೆ.ಬಾಬಾ ಅವರು ಮಾತನಾಡಿ, ಲಾಕ್ಡೌನ್ನ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚಿಸಿರುವ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದರು.
ನಗರದ ಕೌಲ್‌ಬಜಾರ್, ಮಿಲ್ಲರ್‌ಪೇಟೆಯ ಪ್ರಾರ್ಥನಾ ಮಂದಿರ, ಹಗರಿ ಬೊಮ್ಮನಹಳ್ಳಿ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಿರಗುಪ್ಪ ಪ್ರದೇಶಗಳಲ್ಲಿ ಮಸೀದಿಗಳಲ್ಲಿ ಜನರು ಸೇರದಂತೆ ನೋಡಿಕೊಳ್ಳುವ ಹೊಣೆ ಮುಸ್ಲಿಂ ಸಮುದಾಯದ ಮುಖಂಡರದ್ದು ಎಂದರು.