ಕಲಬುರಗಿ/ವಿಜಯನಗರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯ ಓರ್ವ ವಿದ್ಯಾರ್ಥಿ ಹಾಗೂ ವಿಜಯನಗರ ಜಿಲ್ಲೆಯ ಮೂವರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಬುರಗಿಯ ವಿವೇಕಾನಂದ ಬಡಾವಣೆಯಲ್ಲಿರುವ ಮಿಲೇನಿಯಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರಿಕಾಂತ್ ಬೆಳ್ಳೆ 625 ಅಂಕ ಗಳಿಸಿದ್ದಾನೆ. ನಗರದ ಆಳಂದ ಕಾಲೋನಿಯ ನಿವಾಸಿಯಾಗಿದ್ದು, ತಂದೆ ಶಿವಕುಮಾರ್ ಬೆಳ್ಳೆ ಶಿಕ್ಷಕರಾಗಿದ್ದಾರೆ. ಶ್ರೀಕಾಂತ್ ಸಾಧನೆಗೆ ಪೋಷಕರು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ತನ್ನ ಈ ಸಾಧನೆಗೆ ಶಾಲೆಯ ಶಿಕ್ಷಕರು ಮತ್ತು ಕುಟುಂಬಸ್ಥರ ಸಹಕಾರವೇ ಕಾರಣ. ನಮ್ಮ ತಂದೆ ಮಾರ್ಗದರ್ಶನದಂತೆ ವಿದ್ಯಾಭ್ಯಾಸ ಮಾಡಿದೆ. ಅಲ್ಲದೇ ನನ್ನ ಶಿಕ್ಷಕರು ಕೂಡ ನನಗೆ ಬಹಳ ಸಹಕಾರ ನೀಡಿದ್ದಾರೆಂದು ವಿದ್ಯಾರ್ಥಿ ಶ್ರೀಕಾಂತ್ ತಿಳಿಸಿದ್ದಾನೆ. ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಹೆಚ್ಚಿನ ಒತ್ತು ಕೊಟ್ಟು ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಿದ್ದರಿಂದ ನನ್ನ ಮಗ ಇಂದು ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದು ಶ್ರೀಕಾಂತ್ ಅವರ ತಂದೆ ಶಿವಕುಮಾರ್ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿಯ ಎಮ್ಎಮ್ ಪಾಟೀಲ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಅಮೃತಾ, ಕೊಟ್ಟರು ನಗರದ ಗುರುದೇವ ಶಾಲೆಯ ಕವನ ಹಾಗೂ ವಿದ್ಯಾಶ್ರಿ ಕೂಡಾ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗು ಪಾಲಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದು ವಿದ್ಯಾರ್ಥಿನಿ ಅಮೃತಾ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಐವರು ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಮಾರ್ಕ್ಸ್; ಸಾಧಕರು ಹೇಳಿದ್ದೇನು?