ಬಳ್ಳಾರಿ : ಜೆಎಸ್‌ಡ್ಲ್ಯೂ ಕಂಪನಿ ಕೋವಿಡ್ ಕಾರಣ ಹೇಳಿ ಎಕಾಏಕಿ 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಹಿನ್ನೆಲೆ ಸಂತ್ರಸ್ತ ಉದ್ಯೋಗಿಗಳು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ 25 ವರ್ಷಗಳಿಂದ ಜಿಂದಾಲ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಏಕಾಏಕಿ ಆಗಸ್ಟ್ 31ರೊಳಗೆ ರಾಜೀನಾಮೆ ಸಲ್ಲಿಸಬೇಕು, ಇಲ್ಲದಿದ್ದರೆ ಯಾವ ಸೌಲಭ್ಯ ಬರುವುದಿಲ್ಲ ಎಂದು ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಮ್ಯಾನೇಜ್ಮೆಂಟ್‌ನ ಕೇಳಲು ಹೋದರೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಜಿಂದಾಲ್ ಉದ್ಯೋಗಿ ಜೋಷಿ ಎಂಬುವರು ತಮ್ಮ ಅಳಲನ್ನು ತೋಡಿಕೊಂಡರು.
ಜಿಂದಾಲ್ ಉದ್ಯೋಗಿ ಜಹ್ನಾವಿ ಅವರು ಮಾತನಾಡಿ, ಕೋವಿಡ್ -19 ಕಾರಣ ಹೇಳಿ ಕಂಪನಿಯವರು ಕೆಲಸದಿಂದ ತೆಗೆದಿದ್ದಾರೆ. ಬೆಂಗಳೂರು ಕಚೇರಿಯಲ್ಲಿ ನಾಲ್ಕು ಮತ್ತು ಎನರ್ಜಿಯಲ್ಲಿ ಒಬ್ಬರನ್ನು ಉದ್ಯೋಗದಿಂದ ತೆಗೆದು ಹಾಕಿದ್ದಾರೆ. ಒಟ್ಟಾರೆ ಮೊದಲನೇ ಸ್ಲಾಟ್ನಲ್ಲಿ 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೇಳಿದರು.
ಮಾರ್ಚ್, ಏಪ್ರಿಲ್‌ವರೆಗೆ ಮುಂದುವರೆಸಿ ಎಂದು ಕೇಳಿಕೊಂಡಿದ್ದೇವೆ. ಆದರೆ, ಯಾವುದೇ ಸ್ಪಂದನೆ ಬಂದಿಲ್ಲ. ಅಲ್ಲದೆ ಈವರೆಗೂ ಲಿಖಿತ ರೂಪದಲ್ಲಿಯೂ ಮಾಹಿತಿ ನೀಡಿಲ್ಲ. ಅದಕ್ಕಾಗಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದರು.