ಬಳ್ಳಾರಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವಾಗ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಳ್ಳಲು ಹೋದಾಗ, ಮಹಿಳೆ ಸೇರಿ ಎಂಟು ಮಂದಿಯ ಗುಂಪೊಂದು ಕರ್ನಾಟಕ ರಕ್ಷಣಾ ವೇದಿಕೆ ಹೆಸರಿನಲ್ಲಿ ಅಧಿಕಾರಿಗಳನ್ನೇ ಬೆದರಿಸಿದ ಘಟನೆ ಇಲ್ಲಿನ ಕೈಗಾರಿಕಾ ಪ್ರದೇಶದ ಕ್ರಾಸ್ ಬಳಿ ನಡೆದಿದೆ.
ಸರಕು ಸಾಗಣೆ ಆಟೋ ರಿಕ್ಷಾ ಮೂಲಕ ಎಂಟು ಚೀಲಗಳಲ್ಲಿ ಮಹಿಳೆವೋರ್ವಳು ಪಡಿತರ ಅಕ್ಕಿ ಸಾಗಿಸುತ್ತಿದ್ದಾಗ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ಹಲೀಮಾ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಮಹಿಳೆ ಅಧಿಕಾರಿಗಳನ್ನು ತಡೆದು, ಕರವೇ ಸಂಘಟನೆಯ ಮುಖಂಡರಿಗೆ ಕರೆ ಮಾಡಿದ್ದಳು ಎನ್ನಲಾಗ್ತಿದೆ. ತತ್ ಕ್ಷಣವೇ ಸ್ಥಳಕ್ಕಾಗಮಿಸಿದ ಎಂಟು ಮಂದಿ ಗುಂಪೊಂದು, ‘ನೀವು ಅದ್ಹೇಗೆ ಅಕ್ಕಿ ತೆಗೆದುಕೊಂಡು ಹೋಗುತ್ತೀರಿ’ ಎಂದು ಅಧಿಕಾರಿಗಳನ್ನೇ ದಬಾಯಿಸಿ ಪಡಿತರ ಅಕ್ಕಿಯನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಸಂಬಂಧ ಕರ್ತವ್ಯ ನಿರತರಾಗಿದ್ದ ಅಧಿಕಾರಿಗಳಿಗೆ ಬೆದರಿಕೆವೊಡ್ಡಿದ್ದಲ್ಲದೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಸೇರಿದಂತೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.