ಹೊಸಪೇಟೆ : ದೆಹಲಿಯಲ್ಲಿ ರೈತರ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ರೈತರು ನಗರದ ಸಂಕ್ಲಾಪುರದಲ್ಲಿನ ರಾಷ್ಟ್ರೀಯ ಹೆದ್ದಾರಿ-63 ಬಂದ್ ಮಾಡಿ ಪ್ರತಿಭಟಿಸಿದರು.
ಹೊಸ ನೀತಿಯ ವಿರುದ್ಧ ದೆಹಲಿ, ಪಂಜಾಬ್, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಿಂದ ಲಕ್ಷಾಂತರ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಹೋರಾಟವನ್ನು ತಡೆಯಲು ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿಜಾರ್ಜ್ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಡೆ ರೈತ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಹೊಸ ಕಾಯ್ದೆಗಳನ್ನು ಜಾರಿಗೆ ತಂದಿದೆ. ಕೂಡಲೇ ಇವುಗಳನ್ನು ಹಿಂಪಡೆಯಬೇಕು. ಈ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಅಲ್ಲದೇ, ಅತೀವೃಷ್ಟಿಯಿಂದ ಕಂಗಾಲಾಗಿದ್ದಾರೆ. ಒಂದು ವೇಳೆ ಕಾಯಿದೆಗಳನ್ನು ಹಿಂಪಡೆಯದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಧಾರವಾಡದಲ್ಲೂ ಪ್ರತಿಭಟನೆ : ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಧಾರವಾಡದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟಿಸಿದರು. ಹೊರವಲಯದ ನರೇಂದ್ರ ಬೈಪಾಸ್‌ನಲ್ಲಿನ ಟೋಲ್ ಮುಂಭಾಗದಲ್ಲಿ ಸೇರಿದ ರೈತರು ಪುಣೆ-ಬೆಂಗಳೂರು ಹೆದ್ದಾರಿ ತಡೆದು ದಿಢೀರ್ ಪ್ರತಿಭಟಿಸಿದರು.
ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ರಸ್ತೆ ಸಂಚಾರ ಬಂದ್ ಮಾಡಿ ದೆಹಲಿಯಲ್ಲಿನ ರೈತರ ಚಳವಳಿಗೆ ಬೆಂಬಲ ವ್ಯಕ್ತಪಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೈ ಕೊರೆಯುವ ಚಳಿಯಲ್ಲಿ ರೈತರು ಚಳವಳಿ ನಡೆಸುತ್ತಿದ್ರೆ, ಕೇಂದ್ರ ಸರ್ಕಾರ ರೈತರತ್ತ ತಿರುಗಿ ಸಹ ನೋಡುತ್ತಿಲ್ಲ. ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಮುಂದುವರಿದ ಪ್ರತಿಭಟನೆ: ರಸ್ತೆಯಲ್ಲಿ ಕುಳಿತ ಊಟ ಮಾಡಿದ ರೈತರು