ಬಳ್ಳಾರಿ : ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಇಂದು ಸಿರುಗುಪ್ಪ ತಾಲೂಕಿನ ಹಳೇ ಕೋಟೆಯ ಖ್ಯಾತ ನ್ಯಾಯವಾದಿ, ಭಾರತೀಯ ಸೇವಾದಳದ ರಾಜ್ಯ ಅಧ್ಯಕ್ಷರಾಗಿರುವ ಹೆಚ್.ಎಂ.ಗುರುಸಿದ್ಧಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯರ ತಂಡದಿಂದ ಗುರುಸಿದ್ದಸ್ವಾಮಿ ಮತ್ತು ಯುವಕ ವೃಂದದಿಂದ ಹಾವಿನಾಳ್ ಶರಣಪ್ಪ ಅವರು ಸ್ಪರ್ಧೆ ಮಾಡಿದ್ದರು. ಗುಪ್ತ ಮತದಾನದಲ್ಲಿ ಸ್ವಾಮಿ ಅವರಿಗೆ 17 ಮತ್ತು ಶರಣಪ್ಪ ಅವರಿಗೆ 13 ಮತಗಳು ಬಂದು ಸ್ವಾಮಿ ಅವರು ನಾಲ್ಕು ಮತಗಳ ಅಂತರದಿಂದ ಆಯ್ಕೆಯಾದರು. ಸ್ವಾಮಿ ಅವರು ಆಯ್ಕೆಯಾಗುತ್ತಿದ್ದಂತೆ ಸಂಘದ ಹೊರ ಭಾಗದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಂತರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರು ತಮ್ಮ ಮುಂದಿನ ಮೂರು ವರ್ಷದ ನೂತನ ಕಾರ್ಯಕಾರಿ ಮಂಡಳಿಯ ಇತರೇ ಪದಾಧಿಕಾರಿಗಳ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಗಣಿ ಉದ್ಯಮಿ ಅಲ್ಲಂ ಚೆನ್ನಪ್ಪ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಖ್ಯಾತ ನ್ಯಾಯವಾದಿ ಬಿ.ವಿ.ಬಸವರಾಜ್, ಸಹ ಕಾರ್ಯದರ್ಶಿಯಾಗಿ ಕನ್ನಡಪರ ಹೋರಾಟಗಾರ ದರೂರು ಶಾಂತನಗೌಡ ಮತ್ತು ಖಜಾಂಚಿಯಾಗಿ ಈವರಗೆ ವೀರಶೈವ ಕಾಲೇಜಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗೋನಾಳ್ ರಾಜಶೇಖರಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಗುರುಸಿದ್ಧಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ವೀರಶೈವರು ಸೇರಿದಂತೆ ಸರ್ವ ಜನಾಂಗದವರಿಗೆ ಶಿಕ್ಷಣ ನೀಡಿದ ಈ ಸಂಸ್ಥೆಯ ಅಧ್ಯಕ್ಷನಾಗಿ ಸಂತಸ ತಂದಿದೆ. ಎಲ್ಲಾ ಸಮುದಾಯಕ್ಕೆ ಶಿಕ್ಷಣ ನೀಡುವ ಮತ್ತು ಸಂಘವನ್ನು ಮತ್ತಷ್ಟು ಉತ್ತುಂಗ ಸ್ಥಿತಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.