ಬಳ್ಳಾರಿ : ತಾಲೂಕಿನ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಪರಿವೀಕ್ಷಕ ಆರೋಗ್ಯ ಸಹಾಯಕರೊಬ್ಬರು ಸಾವನ್ನಪ್ಪಿದ್ದು, ಪಿಎಂ ವಿಮೆ ಯೋಜನೆಯಡಿ ಪರಿಹಾರ ಧನಕ್ಕೆ ಶಿಫಾರಸು ಮಾಡಲಾಗಿದೆ ಎಂದು ಡಿಹೆಚ್ಒ ಡಾ.ಜನಾರ್ದನ್ ತಿಳಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ, ಸಂಡೂರು ಹಾಗೂ ಬಳ್ಳಾರಿ ತಾಲೂಕಿನಲ್ಲಿ ಕಿರಿಯ ಪರಿವೀಕ್ಷಕ ಆರೋಗ್ಯ ಸಹಾಯಕರು ಮನೆ-ಮನೆ ಸರ್ವೆ ಕಾರ್ಯ ಮಾಡುತ್ತಿದ್ದಾರೆ. ಅದೇ ರೀತಿ ಕೋಳೂರು ಚೆಕ್ ಪೋಸ್ಟ್ ಹಾಗೂ ಮನೆ-ಮನೆ ಸರ್ವೆ ಕಾರ್ಯದಲ್ಲಿ ತೊಡಗಿದ್ದ ಕಿರಿಯ ಆರೋಗ್ಯ ಸಹಾಯಕರೊಬ್ಬರು ಕಳೆದ ಎರಡ್ಮೂರು ದಿನಗಳಿಂದ ಅತೀವ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಗಾಂಧಿನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಕೂಡಲೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ವಿಮ್ಸ್ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೆಂಟಿಲೇಟರ್ ದೊರಕದ ಕಾರಣ ಆರೋಗ್ಯ ಸಹಾಯಕ ಸಾವನ್ನಪ್ಪಿದ್ದಾರೆಂದು ಕಿರಿಯ ಆರೋಗ್ಯ ಪರಿವೀಕ್ಷಕ ಸಹಾಯಕರು ದೂರಿದ್ದಾರೆ. ವಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ಸಾವು ಸಂಭವಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಡಾ.ಹೆಚ್ ಎಲ್ ಜನಾರ್ದನ್ ದೂರು ನೀಡಿದ್ದರು.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಡಿಹೆಚ್ಒ, ಕಿರಿಯ ಪರಿವೀಕ್ಷಕ ಆರೋಗ್ಯ ಸಹಾಯಕ ಸಾವನ್ನಪ್ಪಿರೋದಕ್ಕೆ ಕೇಂದ್ರ ಸರ್ಕಾರದ ಪಿಎಂ ವಿಮೆ ಯೋಜನೆಯಡಿ ಪರಿಹಾರ ಧನಕ್ಕೆ ಶಿಫಾರಸು ಮಾಡಿ, ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಕೋವಿಡ್ ಕಾರ್ಯದಲ್ಲಿ ತೊಡಗಿರುವವರಿಗೆ ಅಥವಾ ಕೋವಿಡ್ ಕೇರ್ ಸೆಂಟರ್ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸಾವನ್ನಪ್ಪಿದ್ರೆ ಅವರಿಗೆ ಅಂದಾಜು ₹50 ಲಕ್ಷ ಪರಿಹಾರ ಧನ ನೀಡಲಾಗುತ್ತೆ.
ಹೀಗಾಗಿ, ಪಿಎಂ ವಿಮೆ ಯೋಜನೆಯಡಿ ಸೂಕ್ತ ಪರಿಹಾರ ನೀಡುವಂತೆ ಕೋರಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಶಿಫಾರಸು ಪತ್ರವನ್ನ ಕಳಿಸಲಾಗಿದೆ. ಅಲ್ಲದೇ, ವಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪ ಹಾಗೂ ಸಕಾಲದಲ್ಲಿ ವೆಂಟಿಲೇಟರ್ ದೊರಕದ ಹಿನ್ನೆಲೆ ಸಾವನ್ನಪ್ಪಿರೋದಾಗಿ ಕಿರಿಯ ಆರೋಗ್ಯ ಸಹಾಯಕರು ದೂರಿದ್ದಾರೆ. ನಾನು ಈಗಾಗಲೇ ವಿಮ್ಸ್ ನಿರ್ದೇಶಕ ಡಾ.ದೇವಾನಂದ ಅವರ ಹತ್ತಿರ ಈ ಕುರಿತು ಸುದೀರ್ಘವಾಗಿ ಚರ್ಚಿಸಿರುವೆ. ಕೋವಿಡ್ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ತುರ್ತಾಗಿ ಚಿಕಿತ್ಸೆ ದೊರಕಬೇಕೆಂದು ಮನವಿ ಮಾಡಿಕೊಂಡಿರುವೆ ಎಂದಿದ್ದಾರೆ.