ಬಳ್ಳಾರಿ: ಇಲ್ಲಿನ ಡಿಸಿ ಕಾಲೊನಿಯಲ್ಲಿರುವ ದಮನಿತ ಮಹಿಳೆಯರ ಶೇಂಗಾ ಚಿಕ್ಕಿ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿದರು.
ದಮನಿತ ಮಹಿಳೆಯರನ್ನ ಉದ್ದೇಶಿಸಿ ಮಾತನಾಡಿದ ಡಿಸಿ ನಕುಲ್ ಅವರು, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು. ಸ್ವಾವಲಂಬಿ ಜೀವನ ನಡೆಸಬೇಕು, ಚಿಕ್ಕಿ ತಯಾರಿಕೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಸದ್ಯ ಈ ಘಟಕದಿಂದ ಅಂಗನವಾಡಿಗಳಿಗೆ ಮಾತ್ರ ಚಿಕ್ಕಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೂ ವಿಸ್ತರಿಸುವ ಮೂಲಕ ಉದ್ಯಮವನ್ನು ಬೆಳೆಸಬೇಕು. ಉದ್ಯಮದಲ್ಲಿ ಯಾವುದೇ ಮಧ್ಯವರ್ತಿಗಳನ್ನು ಅವಲಂಭಿಸದೆ ಮಹಿಳೆಯರೇ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿ ತಾಲೂಕಿನಲ್ಲಿ ಆರಂಭಗೊಂಡ ಶೇಂಗಾ ಚಿಕ್ಕಿ ಘಟಕ ಯಶಸ್ವಿಯಾಗಿ ನಡೆಯುತ್ತಿದೆ. ಇದರಂತೆ ಮಾರ್ಚ್ ತಿಂಗಳಾಂತ್ಯದಲ್ಲಿ ಕೂಡ್ಲಿಗಿಯಲ್ಲಿ ಮಾಜಿ ದೇವದಾಸಿಯರಿಂದ, ಹೊಸಪೇಟೆಯಲ್ಲಿ ಮಂಗಳಮುಖಿಯರಿಂದ ಚಿಕ್ಕಿ ಘಟಕ ಆರಂಭಿಸಲಾಗುವುದು. ಅಂದ್ರಾಳ್‌ನಲ್ಲಿರುವ ಘಟಕಕ್ಕೆ ಶೀಘ್ರದಲ್ಲೇ ಚಿಕ್ಕಿ ತಯಾರಿಕ ಯಂತ್ರಗಳು ಬರಲಿದ್ದು, ಮುಂದಿನ ದಿನಗಳಲ್ಲಿ ಚಿಕ್ಕಿ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.