ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಸ್ಮಾರಕಗಳ ರಕ್ಷಣೆಯ ಕಣ್ಗಾವಲಿಗೆ ಅತ್ಯಾಧುನಿಕ ಸರ್ವೆಲೆನ್ಸ್ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.
ಅಂದಾಜು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಈ ಕ್ಯಾಮೆರಾಗಳ ಅಳವಡಿಕೆಗೆ ಟೆಂಡರ್ ಪ್ರತಿಕ್ರಿಯೆಯನ್ನು ಕರೆಯಲಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಸಲಹೆ, ಸೂಚನೆ ಮೇರೆಗೆ ಈ ಕ್ಯಾಮೆರಾಗಳ ಕಣ್ಗಾವಲು ಕಾರ್ಯಾರಂಭ ಮಾಡಲಿವೆ. ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಾಧ್ಯಮ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ಅವರು ಜಂಟಿಯಾಗಿ ಈ ವಿಷಯ ತಿಳಿಸಿದ್ದಾರೆ. ಐತಿಹಾಸಿಕ ಹಂಪಿಯ ಪ್ರಮುಖವಾದ ಹದಿನೆಂಟು ಸ್ಮಾರಕಗಳ ಬಳಿ ಈ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಅದರ ನೇರ ಪ್ರಸಾರದ ವೀಕ್ಷಣೆಯ ವ್ಯವಸ್ಥೆಯನ್ನೂ ಜಿಲ್ಲಾ ಪೊಲೀಸ್ ಇಲಾಖೆ ಮಾಡಲಿದೆ ಎಂದರು.
ದೇಶ-ವಿದೇಶಗಳಿಂದ ಹಂಪಿಗೆ ಭೇಟಿ ನೀಡಲಿರುವ ಪ್ರವಾಸಿಗರು ಸ್ಮಾರಕಗಳಿಗೆ ಯಾವುದೇ ರೀತಿಯ ಧಕ್ಕೆಯುಂಟು ಮಾಡದೇ ಇರೋದನ್ನು ತಡೆಯೋ ಸಲುವಾಗಿ ಈ ದಿಟ್ಟ ನಿರ್ಧಾರಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಅಲ್ಲದೇ, ಹಂಪಿಯ ವಿಜಯ ವಿಠಲ ದೇಗುಲದ ಬಳಿ ಚಲಿಸುವ ಬ್ಯಾಟರಿ ಚಾಲಿತ ವಾಹನಗಳ ಮರು ಟೆಂಡರ್ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಈಗಿರುವ ಗುತ್ತಿಗೆದಾರರೇ ಮರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಕುದುರೆ ಲಾಲನೆ, ಪಾಲನೆ ವ್ಯವಸ್ಥೆ ಸೇರಿದಂತೆ ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಲಾಗುವುದು. ಆ ಬಳಿಕ ಕುದುರೆ ಟಾಂಗಾದ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.
ಕಳೆದ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಪ್ರಮಾಣದ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿ ಜತೆಗೆ ಮನೆಗಳು ಭಾಗಶಃ ಹಾಗೂ ಬಹುತೇಕ ಕುಸಿದಿದ್ದು, ಜೀವಹಾನಿ, ಮೀನುಗಾರರ ಬಲೆ, ತೆಪ್ಪಗಳ ಕೊಚ್ಚಿ ಹೋಗಿರೋದಕ್ಕೆ ಈಗಾಗಲೇ ಪರಿಹಾರ ಧನವನ್ನು ವಿತರಿಸಲಾಗಿದೆ. ಅಂದಾಜು 4.65 ಕೋಟಿ ರೂ.ಗಳ ಪರಿಹಾರ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿ ಎಂದರು.
ಹಂಪಿ ಸ್ಮಾರಕ ಸಂರಕ್ಷಣೆ ಪೊಲೀಸ್ ಇಲಾಖೆ ಸನ್ನದ್ಧ:
ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಸನ್ನದ್ಧ ವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದರು. ಹಂಪಿಯ ಸ್ಮಾರಕಗಳಿಗೆ ಧಕ್ಕೆಯುಂಟಾದ್ರೆ ಕಠಿಣ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳ ದಾಖಲಾತಿಯಲ್ಲಿ ಇಳಿ ಮುಖ ಕಂಡಿದೆ. ಹಗಲು ದರೋಡೆ ಬಹುತೇಕ ಕಡಿಮೆಯಾಗಿದೆ. ಮನೆಗಳುವು ಇತ್ಯಾದಿ ಪ್ರಕರಣಗಳು ಇಳಿಕೆಯಾಗಿವೆ ಎಂದರು.