ಬಳ್ಳಾರಿ: ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ, ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆ ಪುರಾತನ ಕಾಲದಿಂದಲೂ ಇದೆ. ಜಿಲ್ಲೆಯ ದಿವಾಕರ ಬಾಬು ಲೇಔಟ್ನ ರೇಣುಕಾಚಾರ್ಯ ನಗರದ ಎಸ್.ಉಷಾ ಎಂಬುವರ ಮನೆಯಲ್ಲಿ ತಡರಾತ್ರಿಯಲ್ಲಿ ಬ್ರಹ್ಮ ಕಮಲ ಅರಳಿದ್ದು, ಕುಟುಂಬದ ಸದಸ್ಯರು ಸೇರಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಕಮಲನಾಭನಾದ ವಿಷ್ಣು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರ ಚಾಚಿದಾಗ ಅದರ ಮೇಲೆ ಕಮಲಭವ ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮಕಮಲ ಎನ್ನುವ ಹೆಸರು ಬಂದಿದೆ.
ಕೇವಲ ವರ್ಷಕೊಮ್ಮೆ ಅರಳುವ ಈ ಹೂವು ರಾತ್ರಿ ವೇಳೆ ಅರಳಿ ರಾತ್ರಿಯೇ ಬಾಡಿಹೋಗುತ್ತದೆ. ಒಂದೂವರೆ ವರ್ಷದಲ್ಲಿ ಹೂವು ಬಿಡಲು ಆರಂಭವಾಗುತ್ತದೆ. ಒಂದೇ ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ಮೈ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಒಮ್ಮಲೆ 10-15 ಹದಿನೈದು ಮೊಗ್ಗುಗಳು ಹೂವಾಗಿ ಅರಳುವುದೇ ವಿಸ್ಮಯ.
ಉಷಾ ಅವರ ಮನೆಯ ಮುಂದೆ ಇರುವ ಬ್ರಹ್ಮಕಮಲ ಗಿಡ ಬೃಹತ್ ಗಾತ್ರದ್ದಾಗಿದ್ದ, ಏಕ ಕಾಲಕ್ಕೆ ಬಹಳಷ್ಟು ಹೂಗಳು ಅರಳಿವೆ. ಸ್ಥಳೀಯರು ಬಂದು ಅಪರೂಪದ ಈ ಸೃಷ್ಟಿ ಕೌತುಕವನ್ನು ಕಣ್ತುಂಬಿಕೊಂಡರು.